ಕಲಾವಿದೆ ಲಿಖಿತ ಶೆಟ್ಟಿ ಇವರಿಗೆ ಕನಸು ಕಾರ್ತಿಕ್ ಸ್ಮರಣಾರ್ಥ ಯುವರಂಗ ಪುರಸ್ಕಾರ ಪ್ರದಾನ

ಬೈಂದೂರು: ಯಾವ ಊರಿನಲ್ಲಿ ಸಂಸ್ಕೃತಿ ಬೆಳೆಯುತ್ತದೋ ಆ ಊರು ಅಭಿವೃದ್ಧಿಯಾಗುತ್ತದೆ, ಸಂಸ್ಕೃತಿಯನ್ನು ನಾಶ ಮಾಡಿದ ಊರು ಅಥವಾ ನಶಿಸುತ್ತದೆ ಎಂದು ಖ್ಯಾತ ರೇಡಿಯೋ ನಿರೂಪಕಿ, ಲೇಖಕಿ ಆರ್ ಜೆ ನಯನ ಹೇಳಿದರು.

ಅವರು ಬೈಂದೂರು ತಾಲೂಕಿನ ಅರೆಹೊಳೆಯ ನಂದಗೋಕುಲ ರಂಗಶಾಲೆಯಲ್ಲಿ ನಡೆದ ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕನಸು ಕಾರ್ತಿಕ್ ನೆನಪಿನಲ್ಲಿಅರೆ ಹೊಳೆಪ್ರತಿಷ್ಠಾನ, ಮಂದಾರ (ರಿ.) ಬೈಕಾಡಿ, ರಂಗಪಯಣ (ರಿ.) ಬೆಂಗಳೂರು ಹಾಗೂ ಜನಪ್ರತಿನಿಧಿ ಪತ್ರಿಕೆ ಕುಂದಾಪುರ, ಜಂಟಿಯಾಗಿ ಆಯೋಜಿಸಿದ್ದ ಅರೆಹೊಳೆ ನಾಟಕೋತ್ಸವದ ಮೊದಲದಿನ, ಕಳೆದ ವರ್ಷ ನಿಧನರಾದ ಯುವರಂಗ ಕರ್ಮಿ, ರಂಗ ಕಲಾವಿದ ಕನಸು ಕಾರ್ತಿಕ್ ನೆನಪಿನ ಯುವರಂಗ ಪುರಸ್ಕಾರವನ್ನು ಕಲಾವಿದೆ ಲಿಖಿತ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಲಿಖಿತಾಶೆಟ್ಟಿ ಕನಸು ಕಾರ್ತಿಕ್ ಮುಖ್ಯವಾಗಿ ಹಾಸ್ಯ ಕ್ಷೇತ್ರದಲ್ಲಿಆಸಕ್ತರಾಗಿದ್ದು ಬೇರೆಯವರನ್ನು ಪ್ರೇರೇಪಿಸುತ್ತಿದ್ದುದನ್ನು ಮತ್ತು ಪ್ರೋತ್ಸಾಹಿಸುತ್ತಿದ್ದುದ್ದನ್ನು ನೆನೆಸಿಕೊಂಡರು. ಕನಸು ಕಾರ್ತಿಕ್ ಕಲ್ಪನೆಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ತಮ್ಮ ಸಂತೋಷವನ್ನು ಹಂಚಿಕೊಂಡರು. ಕಾರ್ತಿಕ್ ತಾನು ಬೆಳೆಯುವುದಕ್ಕಿಂತಲೂ ಹೆಚ್ಚಾಗಿ ಬೇರೆಯವರನ್ನು ಬೆಳೆಸುವುದರಲ್ಲಿ ಆಸಕ್ತನಾಗಿದ್ದುದ್ದನ್ನು ಸ್ಮರಿಸಿಕೊಂಡು, ಪ್ರಶಸ್ತಿಯನ್ನು ತಾನು ಕಾರ್ತಿಕ್ ಗೆ ಅರ್ಪಿಸುತ್ತಿದ್ದೇನೆ ಎಂದು ಹೇಳಿದರು.

ಕಾರ್ತಿಕ್ ಅವರ ತಾಯಿ ಭಾರತಿ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಿದರು.

ಮುಖ್ಯ ಅತಿಥಿಯಾಗಿ ಉಡುಪಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಸಚಿನ್ ಪೂಜಾರಿ ಭಾಗವಹಿಸಿ ಕಾರ್ತಿಕ್ ಮತ್ತು ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.

ವೇದಿಕೆಯಲ್ಲಿ ಮಂದಾರ (ರಿ.) ಬೈಕಾಡಿ ಅಧ್ಯಕ್ಷ ರೋಹಿತ್ ಬೈಕಾಡಿ ಉಪಸ್ಥಿತರಿದ್ದರು.

ಕಳೆದ 25 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಜನಪ್ರತಿ ನಿಧಿವಾರ ಪತ್ರಿಕೆಯ ರಜತ ವರ್ಷದ ಸಂಭ್ರಮದ ಭಾಗವಾಗಿ ಆಯೋಜಿಸಲಾಗಿದ್ದಈ ನಾಟಕೋತ್ಸವದಲ್ಲಿ ಜನಪ್ರತಿನಿಧಿ ಪತ್ರಿಕೆಯ ಸಂಪಾದಕ ಸುಬ್ರಮಣ್ಯ ಪಡುಕೋಣೆ ಭಾಗವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಒಂದು ರಂಗಮಂದಿರದ ಕನಸನ್ನು ಸಾಕಾರಗೊಳಿಸಿದ ಅರೆಹೊಳೆ ಸದಾಶಿವ ರಾವ್ ಅವರ ಸಾಧನೆ ಅಭಿನಂದನೀಯ ಎಂದರು.

ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಮಂಜುಳಾ ಜಿ ತೆಕ್ಕಟ್ಟೆ ನಿರೂಪಿಸಿದರು.

ಕನಸು ಕಾರ್ತಿಕ್ ಅವರ ತಾಯಿ ಭಾರತಿ ಪೂಜಾರಿ ಅವರನ್ನು ವಿಶೇಷವಾಗಿ ಗೌರವಿಸಿ ಅಭಿನಂದಿಸಲಾಯಿತು.

ನಂದಗೋಕುಲ ನಿರ್ದೇಶಕಿ ಶ್ವೇತಾ ಅರೆಹೊಳೆ, ಕಲಾವಿದೆ ಪೃಥ್ವಿರಾವ್ ಹಾಗೂ ಅರೆಹೊಳೆಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.