ಡಾ. ರಾಧಾಕೃಷ್ಣನ್: ನೆಲವನ್ನು ಪ್ರೀತಿಸಿ ಆಕಾಶಕ್ಕೇರಿದ ಮಹಾನ್ ಮಾನವತಾವಾದಿ: ಟಿ. ದೇವಿದಾಸ್ ಬರೆದ ವಿಶೇಷ ಬರಹ

ಟಿ. ದೇವಿದಾಸ್

“ಇದು ತತ್ತ್ವಶಾಸ್ತ್ರಕ್ಕೆ ಸಂದ ಗೌರವ. ಓರ್ವ ತತ್ತ್ವಶಾಸ್ತ್ರಜ್ಞನಾಗಿ ನನಗೆ ಈ ಬೆಳವಣಿಗೆಯಿಂದ ತುಂಬಾ ಸಂತಸವಾಗಿದೆ. ತತ್ತ್ವಶಾಸ್ತ್ರಜ್ಞರು ಧರೆಯಾಳುವ ದೊರೆಗಳಾಗಬೇಕೆಂದು ಪ್ಲೇಟೋ ಬಯಸಿದ್ದ. ಭಾರತವು ಓರ್ವ ತತ್ತ್ವಜ್ಞಾನಿಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದು ಬಹಳ ಹೆಮ್ಮೆಯ ಸಂಗತಿ”- ಡಾ.ರಾಧಾಕೃಷ್ಣನ್ ಈ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಬರ್ಟ್ರಾಂಡ್ ರಸೆಲ್ ಆಡಿದ ಮಾತು.

“ವಿಶ್ವವಿದ್ಯಾಲಯ ಎಂಬುದು ಒಂದು ದೇಶದ ಬೌದ್ಧಿಕ ಜೀವನದ ಅಭಯಧಾಮ. ರಾಷ್ಟ್ರಜೀವನದ ಆರೋಗ್ಯಕರ ಬೇರುಗಳು ಕಂಡು ಬರಬೇಕಾದ್ದು ವಿಶ್ವವಿದ್ಯಾನಿಲಯಗಳಲ್ಲಿ.‌ ಈ ಅಭಯಧಾಮಗಳು ಮೃಗಾಲಯ ಅಥವಾ ವಸ್ತು ಸಂಗ್ರಹಾಲಯಗಳಾಗದಿರಲಿ. ನಾವು ಶಿಕ್ಷಣ ವ್ಯವಸ್ಥೆಯನ್ನು ಕುಲಗೆಡಿಸಿದರೆ ನಮ್ಮ ಗೋರಿಯನ್ನು ನಾವೇ ತೋಡಿಕೊಂಡಂತೆ. ಬೌದ್ಧಿಕ ಉತ್ಸಾಹ ಕಳೆದುಕೊಂಡ ವ್ಯಕ್ತಿಗಳಿರುವಲ್ಲಿ ನಾಗರಿಕತೆಗೆ ಭವಿಷ್ಯವಿರಲಾರದು“- ರಾಧಾಕೃಷ್ಣನ್ ಆಡಿದ ಅಂದಿನ ಮಾತುಗಳು ದುರಂತ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ. ಠಾಗೋರ್, ಅರವಿಂದ, ವಿವೇಕಾನಂದ ಹಾಗೂ ಗಾಂಧಿ ಅವರ ವಿಚಾರಧಾರೆಯನ್ನು ಅರಗಿಸಿಕೊಂಡ ರಾಧಾಕೃಷ್ಣನ್ ಅಪ್ಪಟ ರಾಷ್ಟ್ರೀಯವಾದಿ ವಿದ್ವಾಂಸರಾಗಿ ಹೆಸರಾದವರು. ಕೊಲ್ಕೊತ್ತೆಯ ಕಿಂಗ್ ಜಾರ್ಜ್ ಪೀಠ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ, ಅನಂತರ ೧೯೪೮ ರಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣ ಆಯೋಗದ ಅಧ್ಯಕ್ಷರಾಗಿ, ಮರುವರ್ಷವೆ ಸರ್ಕಾರಕ್ಕೆ ವರದಿಯನ್ನು ಒಪ್ಪಿಸಿದರು. ಕತ್ತಲಿನಿಂದ ಬೆಳಕಿನೆಡೆಗೆ ಶಿಕ್ಷಣ ನಮ್ಮನ್ನು ಕರೆದೊಯ್ಯುಬೇಕು. ನ್ಯಾಯ ಹಾಗೂ ತರ್ಕದ ಅಧಿಪತ್ಯ ಹೊರತುಪಡಿಸಿ ಉಳಿದೆಲ್ಲ ಬಗೆಯ ದಬ್ಬಾಳಿಕೆಯಿಂದ ಮುಕ್ತಿ ಒದಗಿಸಬೇಕು. ಶಿಕ್ಷಣವು ಪೂರ್ವಗ್ರಹಗಳು, ಅಜ್ಞಾನ ಹಾಗೂ ಅಂಧಶ್ರದ್ಧೆಯಿಂದ ನಮ್ಮನ್ನು ಬಿಡುಗಡೆಗೊಳಿಸಬೇಕು. ಅಧ್ಯಾತ್ಮಿಕ ಶಿಕ್ಷಣ ನೀಡಬೇಕೆಂದು ಹೇಳಿದ ಅವರು ಧರ್ಮ ನಿರಪೇಕ್ಷತೆ ಎಂದರೆ ಧಾರ್ಮಿಕ ಅನಕ್ಷರತೆಯಲ್ಲ. ಬದಲಾಗಿ ಅದು ಗಾಢವಾದ ಅಧ್ಯಾತ್ಮಿಕತೆ. ಜಗತ್ತಿನ ಪರಿವರ್ತನೆಗೆ ಕಾರಣರಾದ ಎಲ್ಲ ಮಹಾನ್ ಚಿಂತಕರ ವಿಚಾರಧಾರೆಯನ್ನು, ಎಲ್ಲ ಧರ್ಮಗುರುಗಳ ತಾತ್ತ್ವಿಕ ಚಿಂತನೆಗಳನ್ನು, ಬೋಧನೆಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕೆಂದು ಅವರು ನೀಡಿದ ವರದಿಯನ್ನೇ ಮೂಲೆಗುಂಪು ಮಾಡಿದವರು ನಾವು.

ಮೈಸೂರು, ಕೊಲ್ಕೊತ್ತಾ, ಕೇಂಬ್ರಿಡ್ಜ್, ಪ್ರಿನ್ಸ್ ಟನ್, ಹಾರ್ವರ್ಡ್, ಯೇಲ್, ಶಿಕಾಗೊ ಮುಂತಾದ ವಿಶ್ವವಿದ್ಯಾನಿಲಯಗಳಲ್ಲಿ ಅಪಾರ ಮನ್ನಣೆ ಪಡೆದ ರಾಧಾಕೃಷ್ಣನ್ ತಮ್ಮ ವಿದ್ವತ್ತಿಗೆ ಸ್ಟಾಲಿನ್, ರಸೆಲ್, ಅಲ್ಡಸ್ ಹಕ್ಸ್ಲಿ, ಅರ್ನಾಲ್ಡ್ ಟಾಯ್ನಬೀ ಮುಂತಾದವರು ಮಾರುಹೋಗುವಂತೆ ಮಾಡಿದವರು. ಆದರೆ ಭಾರತಕ್ಕೆ ಮಾತ್ರ ಸಾಕಷ್ಟು ಪ್ರಭಾವದಲ್ಲಿ ಇವರು ಮೇಲ್ಪಂಕ್ತಿಯಾಗಲೇ ಇಲ್ಲ. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದ ಇವರು ವ್ಯಾಸಂಗದ ಅವಧಿಯಲ್ಲಿ ಬಾಳೆಲೆ ಕೊಳ್ಳಲು ಹಣವಿಲ್ಲದೆ ನೆಲವನ್ನು ತೊಳೆದು ಉಂಡವರು. ತಮಗೆ ದೊರೆತ ಚಿನ್ನದ ಪದಕವನ್ನೇ ಮಾರಿದರು. ಮನೆಯ ಜವಾಬ್ದಾರಿ ಹೊತ್ತ ಇವರು ಕಿರಿಯ ಸಹಪಾಠಿಗಳಿಗೆ ಮನೆಪಾಠ ಹೇಳಿ ಹಣಗಳಿಸುತ್ತಿದ್ದರು. ಮದ್ರಾಸಿನಲ್ಲಿ ಶಿಕ್ಷಣ ಇಲಾಖೆಯ ಉಪಸಹಾಯಕ ಇನ್ ಸ್ಪೆಕ್ಟರ್ ಆಗಿ ಸೇವೆ ಆರಂಭಿಸಿದರು.

ಗಾಂಧೀಜಿ ಜೊತೆ ಸೇರಿ ರಾಷ್ಟ್ರೀಯ ಹೋರಾಟವನ್ನು ಬೆಂಬಲಿಸಿ ಲೇಖನಗಳನ್ನು ಬರೆದರು. ೧೯೧೮ರಿಂದ ೧೯೨೧ರವರೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ದುಡಿದರು. ಅನಂತರ ಕೊಲ್ಕೊತ್ತಾ ವಿಶ್ವವಿದ್ಯಾನಿಲಯದ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಅವರನ್ನು ಮೈಸೂರಿನಿಂದ ಬಹುವೈಭವದಿಂದ ಬೀಳ್ಕೊಡಲಾಯಿತು. ವಿದ್ಯಾರ್ಥಿಗಳೇ ಅವರನ್ನು ಕರೆದೊಯ್ಯುವ ಸಾರೋಟನ್ನು ರೈಲು ನಿಲ್ದಾಣದವರೆಗೆ ಎಳೆದರು. ಅವರಿಗಾಗಿ ಕಾದಿರಿಸಿದ್ದ ಕಂಪಾರ್ಟಮೆಂಟನ್ನು ಒರಗು ದಿಂಬು, ರತ್ನಗಂಬಳಿಯನ್ನು ಹಾಸಿ ಮಲಗುವ ಸೀಟನ್ನು, ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವಮಂದಿರವನ್ನು ಭಕ್ತರು ಅಲಂಕರಿಸಿದಂತೆ ಅಲಂಕರಿಸಿದ್ದರು. ರಾಧಾಕೃಷ್ಣನ್ ಅವರಿಗೆ ಜಯವಾಗಲಿ ಎಂಬ ಕೂಗು ರೈಲು ನಿಲ್ದಾಣದಲ್ಲಿ ಮೊಳಗುತ್ತಿತ್ತು. ಆ ದಿನ ಭಾವೋದ್ರೇಕದಿಂದ ಅದೆಷ್ಟು ಜನ ಅತ್ತರೋ ! ಈ ಪ್ರಮಾಣದ ಪ್ರೀತಿಗೆ ರಾಧಾಕೃಷ್ಣನ್ ಕಣ್ಣಲ್ಲೂ ನೀರು ತುಂಬಿತು. ಇಂಥ ಅಪರೂಪದ ದೃಶ್ಯ ಇತಿಹಾಸದಲ್ಲಿ ಇನ್ನೊಂದಿರಲಾರದು!!!
**

ಅಧ್ಯಾಪಕ, ಉಪನ್ಯಾಸಕ ಹುದ್ದೆಯಿಂದ ಹಂತಹಂತವಾಗಿ ಮೇಲೇರಿ ಎರಡು ಬಾರಿ ಉಪ ರಾಷ್ಟ್ರಪತಿಯಾಗಿ, ನಂತರ ರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಕಾರ್ಯನಿರ್ವಹಿಸಿದರೂ ಶಿಕ್ಷಕರಾಗಿಯೇ ಉಳಿದರು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ತನ್ನ ಪ್ರೊಫೆಸರ್ ಸ್ಥಾನಕ್ಕೆ ಚ್ಯುತಿ ತರುವುದಿಲ್ಲವೆಂದಾದರೆ ಮಾತ್ರವೇ ರಷ್ಯಾಕ್ಕೆ ರಾಯಭಾರಿಯಾಗಿ ಹೋಗುತ್ತೇನೆಂದು ನೆಹರೂಗೆ ತಾಕೀತು ಮಾಡಿದ್ದರು. ೧೯೫೨ರಲ್ಲಿ ಯುನೆಸ್ಕೋ ಮಹಾಧಿವೇಶನ ಅಧ್ಯಕ್ಷರಾಗಿ ಏಷ್ಯಾದ ಗೌರವ ಹೆಚ್ಚಿಸಿದರು. ಟೆಹರಾನ್, ಪೆನ್ಸಿಲ್ವೇನಿಯಾ, ಮಾಸ್ಕೋ, ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ರೋಮ್ ಮುಂತಾದ ಜಗತ್ತಿನ ಸುಮಾರು ನೂರು ವಿಶ್ವವಿದ್ಯಾನಿಲಯಗಳು ಇವರಿಗೆ ಗೌರವ ಡಾಕ್ಟರೇಟ್ ನೀಡಿದವು.

ಭಾರತದ ಸಂವಿಧಾನದ ೫೨ರ ವಿಧಿಯ ಪ್ರಕಾರ ಕೇಂದ್ರಸರ್ಕಾರದ ಕಾರ್ಯಾಂಗದ ಮುಖ್ಯಸ್ಥರು ರಾಷ್ಟ್ರಪತಿ. “ಭಾರತಕ್ಕೆ ಒಬ್ಬ ರಾಷ್ಟ್ರಪತಿ ಇರತಕ್ಕದ್ದು “ಎಂದು ಸಂವಿಧಾನ ನಿರ್ದೇಶಿಸುತ್ತದೆ. ಹೀಗೆ ನಿರ್ದೇಶಿಸುವುದರಲ್ಲಿ ಬಲವಂತದ ಛಾಯೆ ಕಾಣುತ್ತದೆ. ಇವರು ರಕ್ಷಣಾ ಬಲದ ಸರ್ವೋಚ್ಚ ನಾಯಕರಾದರೂ ಹಕ್ಕು ಕಾನೂನಿನ ಮಿತಿಗೆ ಅಥವಾ ವ್ಯಾಪ್ತಿಗೊಳಪಟ್ಟವರೆಂದು ಈ ವಿಧಿ ಹೇಳುತ್ತದೆ. ಐದು ವರ್ಷಗಳ ಸೇವಾವಧಿಯ ರಾಷ್ಟ್ರಪತಿಯನ್ನು ಆರಿಸುವುದು ಈ ದೇಶದ ಜನರಲ್ಲ. ಇದೊಂದು ಅಸಂಗತ ನಾಟಕದಂತೆ. ರಾಷ್ಟ್ರಪತಿಗಳೆಂದರೆ ರಬ್ಬರ್ ಸ್ಟ್ಯಾಂಪ್ ಎಂಬ ಭಾವನೆ ಸಂವಿಧಾನವನ್ನು ಓದಿಕೊಂಡವರಿಗೆ ಸಾಮಾನ್ಯವಾಗಿ ಇರುತ್ತದೆ. ಅದು ಅತ್ಯುನ್ನತವಾದ ಸೌಲಭ್ಯಗಳನ್ನು ಅನುಭವಿಸುವ ದೊಡ್ಡಣ್ಣ. ಇದ್ದೂ ಇಲ್ಲದಂತಿರಬೇಕಾದ ಸ್ಥಾನ. ಬ್ರಿಟನ್ ರಾಣಿಯ ಹಾಗೆ ಉತ್ಸವಮೂರ್ತಿ. ಸಾಂವಿಧಾನಿಕವಾಗಿ ಇವರು ಎಲ್ಲರಿಗಿಂತ ದೊಡ್ಡವರು. ಆಡಳಿತ ಪಕ್ಷದ ಕೈಗೊಂಬೆ- ಹೀಗೆ ಈ ಸ್ಥಾನದ ಬಗ್ಗೆ ಅಪದ್ಧದ ಮಾತುಗಳಿವೆ ಈ ದೇಶದಲ್ಲಿ. ಇಂಥವುಗಳಿಗೆ ಅಪವಾದವೆಂಬಂತೆ ಆ ಪೀಠವನ್ನೇರಿ ಅದರ ಘನತೆಯನ್ನು ಉನ್ನತೀಕರಿಸಿದವರು ಡಾ. ರಾಧಾಕೃಷ್ಣನ್. ಅವರಂತೆ ಡಾ. ಝಾಕಿರ್ ಹುಸೇನ್, ಅಬ್ದುಲ್ ಕಲಾಂ, ಪ್ರಣಬ್ ಮುಖರ್ಜಿಯವರನ್ನು ಇಲ್ಲಿ ನೆನಪಿಸಬಹುದು. ೧೯೫೨-೬೨ರ ಅವಧಿಯಲ್ಲಿ ಎರಡು ಬಾರಿ ಉಪರಾಷ್ಟ್ರಪತಿಯಾಗಿದ್ದ ರಾಧಾಕೃಷ್ಣನ್ ೧೯೬೨ರಲ್ಲಿ ರಾಷ್ಟ್ರಪತಿಯಾದರು.

ಆಗ ರಾಧಾಕೃಷ್ಣನ್ ರಿಗೆ ೧೦ಸಾವಿರ ರೂಪಾಯಿ ಮಾಸಿಕ ವೇತನ ಬರುತ್ತಿತ್ತು. ಅದರಲ್ಲಿ ೨.೫ ಸಾವಿರ ಮಾತ್ರ ಉಳಿಸಿಕೊಂಡು ಉಳಿದ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರನಿಧಿಗೆ ವಂತಿಗೆಯಾಗಿ ನೀಡಿದರು. ‌೧೯೬೫ ರಲ್ಲಿ ಪಾಕಿಸ್ತಾನ ನಮ್ಮೊಂದಿಗೆ ಯುದ್ಧಕ್ಕೆ ಬಂದಾಗ ರಾಷ್ಟ್ರಪತಿಗಳಿಗೆ ವಿಶೇಷ ಭದ್ರತೆ ಒದಗಿಸುವ ಸನ್ನಾಹ ನಡೆದಿತ್ತು. “ಜನರಿಗೆ ಏನು ಒದಗಿ ಬರುವುದೋ ಅದೇ ನನಗೂ ಇರಲಿ” ಎಂದು ಹೇಳಿ ಆ ಯೋಜನೆಯನ್ನು ವಿರೋಧಿಸಿದ್ದರು. ರಾಷ್ಟ್ರಪತಿ ಎನ್ನುವ ಹುದ್ದೆ ನಮ್ಮ ದೇಶದ ಸಾಂಸ್ಕೃತಿಕ ಮತ್ತು ಐತಿಹಾಸಿಕ ವೈಭವವನ್ನು ಪ್ರತಿನಿಧಿಸುವ, ಪ್ರತಿಬಿಂಬಿಸುವ ಹಾಗೂ ಜಗತ್ತಿಗೆ ನಮ್ಮ ಶ್ರೀಮಂತಿಕೆಯನ್ನು ಅಭಿವ್ಯಕ್ತಿಸುವ ಮಾಧ್ಯಮವಿದು. ೧೯೬೪ ಮೇ ದಲ್ಲಿ ನೆಹರು ಮೃತರಾಗಿದ್ದರು. ಶಾಸ್ತ್ರಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವವರೆಗೆ ರಾಧಾಕೃಷ್ಣನ್ ದೇಶದ ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ೧೯೬೨ರಲ್ಲಿ ರಾಷ್ಟ್ರಪತಿಯಾಗಿ ರಾಧಾಕೃಷ್ಣನ್ ಮಾಡಿದ ಮೊದಲ ಕೆಲಸವೆಂದರೆ ಹತ್ತು ಸಾವಿರ ರೂಪಾಯಿಗಳ ಮಾಸಿಕ ವೇತನವನ್ನು ಮೂರು ಸಾವಿರಕ್ಕೆ ಇಳಿಸಿದ್ದು. ತೆರಿಗೆ ಕಳೆದು ೧೯೦೦ರೂಗಳು ಇವರಿಗೆ ಸಿಗುತ್ತಿತ್ತು. ಜನಸಾಮಾನ್ಯರು ವಾರದಲ್ಲಿ ಎರಡು ದಿನ ಯಾವ ಪೂರ್ವ ಅನುಮತಿಯಿಲ್ಲದೆ ತಮ್ಮನ್ನು ಭೇಟಿಯಾಗಬಹುದೆಂದು ಹೇಳಿದ್ದ ರಾಧಾಕೃಷ್ಣನ್ ತಮ್ಮ ಅವಧಿ ಮುಗಿಯುವವರೆಗೂ ಅದನ್ನು ಪಾಲಿಸಿದ್ದರು.

ರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದ ಮೇಲೆ ರಾಧಾಕೃಷ್ಣನ್ ಮದ್ರಾಸಿಗೆ ಬಂದು ನೆಲೆಸಿದರು. ಮೈಲಾಪುರದ ತಮ್ಮ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಅವರನ್ನು ಆಗಿನ ರಾಷ್ಟ್ರಪತಿ ಡಾ. ಝಾಕಿರ್ ಹುಸೇನ್ ಬಂದು ಮಾತಾಡಿಸಿ, ಸಾಹಿತ್ಯ ಅಕಾಡೆಮಿಯ ಮೊದಲ ಫೆಲೋಶಿಪ್ ಅನ್ನು ನೀಡಿದರು. ೧೯೬೭ರಲ್ಲಿ ವಿಶ್ರಾಂತರಾಗಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ ಕೆಲವೇ ದಿನಗಳಲ್ಲಿ ಅವರಿಗೆ ಹೃದಯಾಘಾತವಾಯಿತು. ೧೯೭೫, ಏಪ್ರಿಲ್ ೧೭ ರಂದು ಅವರು ಸ್ವರ್ಗಸ್ಥರಾದರು. ಇವರ ಬಗ್ಗೆ ಜನಸಾಮಾನ್ಯರಲ್ಲಿ ಎಷ್ಟೊಂದು ಪ್ರೀತಿ-ಗೌರವ ಇತ್ತೆಂಬುದಕ್ಕೆ ನಿದರ್ಶನವೆಂದರೆ ಇವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಸೇರಿದ ಅಪಾರ ಜನಸ್ತೋಮ..!!! ಕೂಲಿಯವರು, ರಿಕ್ಷಾ ಎಳೆಯುವವರು, ಕಾರ್ಮಿಕರು, ಪಕ್ಷ ಕಾರ್ಯಕರ್ತರು, ರಾಜಕಾರಣಿಗಳು ಅಂತಿಮ ದರ್ಶನಕ್ಕೆ ಸೇರಿದ್ದರು. ಇಡಿಯ ದೇಶವೇ ಅವ್ಯಕ್ತ ಶೋಕದಲ್ಲಿ ಮುಳುಗಿತ್ತು. ಆದರೆ ಇಬ್ಬರು ಮಾತ್ರ ಇವರ ಅಂತಿಮ ದರ್ಶನಕ್ಕೆ ಬರಲಿಲ್ಲ. ಅವರೆಂದರೆ ಇಂದಿರಾಗಾಂಧಿ ಮತ್ತು ಫಕ್ರುದ್ದೀನ್ ಅಹಮ್ಮದ್.

ಆಳವಾದ ಸಾಮಾಜಿಕ ಪ್ರಜ್ಞೆ, ಗಾಢ ರಾಜಕೀಯ ಸಂವೇದನೆ ಮತ್ತು ಅಗಾಧವಾದ ಪಾಂಡಿತ್ಯದಿಂದಾಗಿ ಎಲ್ಲರ ಗಮನ ಸೆಳೆದಿದ್ದ ರಾಧಾಕೃಷ್ಣನ್ ನೆಹರೂ ವಿದೇಶ ನೀತಿಗೆ ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿದ್ದರು. ಪ್ರಜಾಪರವಾದವೇ ಅವರ ರಾಜಕೀಯ ತತ್ತ್ವಜ್ಞಾನದ ಸಾರ. ರಾಜಕೀಯ ಸಮಯ ಸಾಧಕತನ ಮತ್ತು ಒತ್ತಡಗಳಿಂದ ಭ್ರಷ್ಟರಾಗದೆ, ಅಧಿಕಾರದಲ್ಲಿದ್ದಾಗಲೂ ನೆಹರೂ ಸರ್ಕಾರ ಮತ್ತು ಅನಂತರ ಬಂದ ಸರ್ಕಾರಗಳನ್ನು ಅವರು ಟೀಕಿಸಿದ್ದರು. ಜನಸಾಮಾನ್ಯರ ದನಿಯಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಇದೆ. ತಮ್ಮ ವೈಯಕ್ತಿಕ ಬದುಕಿನ ವಿವರಗಳನ್ನು ಜತನವಾಗಿ ಕಾಪಾಡಿಕೊಂಡಿದ್ದ ರಾಧಾಕೃಷ್ಣನ್ ಸ್ನೇಹ ಸಲುಗೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಅವರೊಂದಿಗೆ ಬಹುಕಾಲದ ಒಡನಾಟ ಇದ್ದವರಿಗೂ ಅವರ ಒಳಬದುಕಿನ ವಿವರಗಳನ್ನು ತಿಳಿಯಲಾಗಲಿಲ್ಲ. ತೀರಾ ವೈಯುಕ್ತಿಕ ವಿವರದ ಪ್ರಶ್ನೆಗಳಿಗೆ ಉತ್ತರವಾಗಿ ಮೌನಕ್ಕೆ ಶರಣಾಗುತ್ತಿದ್ದರು. ಪರಿಹಾಸ್ಯದೊಂದಿಗೆ ವಿಷಯಾಂತರ ಮಾಡುತ್ತಿದ್ದರು.

ತಮ್ಮ ಭಾವನೆಗಳನ್ನು ಪ್ರಚುರಪಡಿಸುತ್ತಿರಲಿಲ್ಲ. ಇವರ ಒಟ್ಟೂ ಬದುಕಿನ ಹಂಬಲವೇನೆಂದು ಅವರ ಸಮಕಾಲೀನರಿಂದ ಅರಿಯಲಾಗಲೇ ಇಲ್ಲ.‌ ಶಿಸ್ತಿನ ಪಾಂಡಿತ್ಯದಿಂದ ಬಾಲ್ಯದ ಅತಂತ್ರ ಸ್ಥಿತಿಯನ್ನು ಮೀರಿದರು. ಧನದ ಕೊರತೆ ಅವರನ್ನು ಧೃತಿಗೆಡಿಸಲಿಲ್ಲ. ಜಗತ್ತನ್ನು ಪ್ರೀತಿಯಿಂದ, ಮುಗ್ಧತೆಯಿಂದ ನೋಡಿದರು. ಪ್ರತಿಯೊಬ್ಬರನ್ನೂ ಗೌರವಿಸಿ ಮಾತನಾಡಿಸುತ್ತಿದ್ದರು. ಅದನ್ನು ತಮ್ಮ ತತ್ತ್ವಜ್ಞಾನಕ್ಕಿಂತ, ಕೊಡುಗೆಗಳಿಗಿಂತ ಮುಖ್ಯವೆಂದು ತಿಳಿದಿದ್ದರು. ಕೆಲವೊಮ್ಮೆ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದರು. ಸಂತ, ಗುರು ಎಂದು ತನ್ನನ್ನು ಯಾರಾದರೂ ಕರೆದರೆ ವಿರೋಧಿಸುತ್ತಿದ್ದರು. ತಾನು ಪಾಲಿಸದಿದ್ದರೂ ಅತ್ಯುನ್ನತ ಮಟ್ಟವನ್ನು ಬೋಧಿಸುವುದು ತನ್ನ ಕರ್ತವ್ಯವೆಂದು ಅವರು ಸೋಗಲಾಡಿತನದ ಆಪಾದನೆಗೆ ಮಾರುತ್ತರ ಕೊಡುತ್ತಿದ್ದರು. ಅವರ ಬರೆಹಗಳನ್ನು ವಿಮರ್ಶಿಸಿದರೂ ಇದ್ದಾರೆ. ವ್ಯಂಗ್ಯವಾಗಿ ಹೇಳಿದವವರೂ ಇದ್ದಾರೆ. ಬೌದ್ಧಿಕ ಶಿಸ್ತಿನ ಚಿಂತಕರಲ್ಲ ಎಂದು ಅಣಕಿಸಿದವರೂ ಇದ್ದಾರೆ. ಇಂಡಿಯನ್ ಫಿಲಾಸಫಿ ಮತ್ತು ಈಸ್ಟರ್ನ್ ರಿಲಿಜನ್ಸ್ ಆಂಡ್ ವೆಸ್ಟರ್ನ್ ಥಾಟ್ ಎಂಬೆರಡು ಇವರ ಗ್ರಂಥಗಳು ಅವರ ವಿದ್ವತ್ತಿಗೆ ಜ್ವಲಂತ ನಿದರ್ಶನ.

ಅವರ ಚಿಂತನೆಗಳು ಬಹುಮಟ್ಟಿಗೆ ಉಪನಿಷತ್ ವಿಚಾರಧಾರೆಯಿಂದ ಹುಟ್ಟಿದವುಗಳು. ಆಧುನಿಕ ಪ್ರಜಾಪ್ರಭುತ್ವ, ಉದಾರವಾದವನ್ನು ಇದರೊಂದಿಗೆ ಅವರು ಸಮೀಕರಿಸಿದ್ದರು. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಕೇವಲ ಮಾಹಿತಿಯನ್ನು ನೀಡಬಾರದು. ಮೌಲ್ಯಗಳನ್ನು ರೂಢಿಸಬೇಕು. ಶಿಕ್ಷಕ ವೃತ್ತಿ ವ್ಯಾಪಾರವಲ್ಲ. ಅದೊಂದು ಕಲೆ, ಒಂದು ಆದರ್ಶ. “ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನತೆ ಮತ್ತು ಮೃತ್ಯುಂಜಯತೆ ಎಂಬೆರಡು ಅಂಶಗಳಿವೆ. ಸಹನೆ ಮತ್ತು ಅರಿವಿನ ದೆಸೆಯಿಂದಾಗಿ ಇದು ಶತಮಾನಗಳಿಂದಲೂ ಜೀವಂತವಾಗಿದೆ. ಆದರೆ ಇಂದು ನಾವು ಅನಿಶ್ಚಿತತೆ ಮತ್ತು ಸಂಶಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಕಣ್ಣಮುಂದಿನ ಮಬ್ಬು ದೀಪ ನೋಡ್ಕೊಂಡು ನಾಳಿನ ದಾರಿ ನಡೆಯುವುದು ತರವಲ್ಲ. ದೂರದಲ್ಲಿ ಮಿನುಗುವ ತಾರೆಗಳ ಬೆಳಕಿನಲ್ಲಿ ಅಡಿಯಿಡಬೇಕಾಗಿದೆ” ಎಂದು ಅವರು ೧೯೬೭, ಮೇ ೧೭ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ವಿದಾಯ ಭಾಷಣದಲ್ಲಿ ಈ ವಿವೇಕದ ಸಂದೇಶವನ್ನು ನಮಗೆ ನೀಡಿದರು.

ರಾಧಾಕೃಷ್ಣನ್ ಹಲವು ಮಜಲುಗಳಲ್ಲಿ ಪರಿಪೂರ್ಣ ಬದುಕನ್ನು ಬಾಳಿದವರು. ಪ್ರಬುದ್ಧ ಚಿಂತಕ, ಪ್ರಗಲ್ಭ ಅಸ್ಖಲಿತ ವಾಗ್ಮಿ, ಉದ್ಭೋದಕ ಪ್ರಾಧ್ಯಾಪಕ, ಶುಕ್ರವತ್ತಾದ ಶೈಲಿಯ ಲೇಖಕ, ದಣಿವಿರದ ಭಾಷಾಂತರಕಾರ, ವ್ಯಾಖ್ಯಾನಕಾರ, ಸಾಹಸಿ ತತ್ತ್ವಜ್ಞಾನಿ, ಉಗ್ರ ರಾಷ್ಟ್ರೀಯವಾದಿ ದೇಶಾಭಿಮಾನಿ, ರಚನಾತ್ಮಕ ಶೈಕ್ಷಣಿಕ ಆಡಳಿತಗಾರ, ಮಹಾನ್ ಮಾನವತಾವಾದಿ, ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರ ಶಿಕ್ಷಕ ಆದರ್ಶ ಶಿಕ್ಷಕ. ಬ್ರಿಟಿಷ್ ನೈಟ್ ಪದವಿ, ಭಾರತ ರತ್ನ, ಆರ್ಡರ್ ಆಫ್ ಮೆರಿಟ್, ಜರ್ಮನ್ ಬುಕ್ ಟ್ರೇಡ್ ಶಾಂತಿ ಪ್ರಶಸ್ತಿ, ಟೆಂಪಲ್ಡನ್ ಪ್ರಶಸ್ತಿಗಳನ್ನು ಪಡೆದವರು. ರಾಧಾಕೃಷ್ಣನ್ ರಿಗೆ ಐವರು ಪುತ್ರಿಯರು, ಒಬ್ಬ ಮಗ. ತನ್ನ ಹುಟ್ಟುಹಬ್ಬ ಆಚರಿಸುವ ಬದಲು ಆ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವುದು ಸೂಕ್ತವೆಂದೂ ರಾಧಾಕೃಷ್ಣನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಶಿಕ್ಷಕರ ರಾಷ್ಟ್ರೀಯ ಫೆಡರೇಶನ್ ವಿನಂತಿಯ ಮೇರೆಗೆ ೧೯೬೨ರಿಂದ ರಾಧಾಕೃಷ್ಣನ್ ಜನ್ಮದಿನವನ್ನು ಭಾರತ ಸರ್ಕಾರ “ರಾಷ್ಟ್ರೀಯ ಶಿಕ್ಷಕರ ದಿನ” ಎಂದು ಘೋಷಿಸಿ ಪ್ರತಿವರ್ಷವೂ ಆಚರಿಸಲು ನಿರ್ಧರಿಸಿತು.

ಪೌರಸ್ತ್ಯ ತತ್ತ್ವಜ್ಞಾನವನ್ನು ಜಗತ್ತಿಗೆ ಸಾರಿದ ಇವರ ಉಪನ್ಯಾಸಗಳು ಜಾಗತಿಕ ಪ್ರಶಂಸೆಯನ್ನು ಗಳಿಸಿವೆ. ಪಾಶ್ಚಾತ್ಯ ಮತ್ತು ಪೌರಸ್ತ್ಯ ತತ್ತ್ವಶಾಸ್ತ್ರಗಳ ಸಮನ್ವಯಕಾರರಾಗಿ ಇವರು ೪೦ ಕ್ಕೂ ಅಧಿಕ ಗ್ರಂಥಗಳನ್ನು ಬರೆದಿದ್ದಾರೆ. ಯುದ್ಧವಿರೋಧಿ ನಿಲುವನ್ನು ಹೊಂದಿದ್ದ “ಮನುಷ್ಯ ತನ್ನನ್ನು ತಾನು ಅರಿಯಲು ಪ್ರಯತ್ನಿಸಬೇಕು” ಅಂದಿದ್ದಾರೆ. ಧರ್ಮವನ್ನು ಶಾಲೆಗಳಲ್ಲಿ ಬೋಧಿಸಬಾರದು. ಜ್ಞಾನ ಮತ್ತು ಭಾವಸಂಸ್ಕಾರಕ್ಕೆ ಶಿಕ್ಷಣದಲ್ಲಿ ಒತ್ತು ಕೊಡಬೇಕೆಂದು, ಕ್ರೀಡೆ, ಎನ್ ಸಿಸಿ ಯಂಥ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡಬೇಕು ಎಂದರು.‌ ಇವು ಸಾಂಘಿಕ ಮನೋಭಾವ, ಶಿಸ್ತು, ಶ್ರಮಗೌರವದಂಥ ಮೌಲ್ಯಗಳನ್ನು ಬೆಳೆಸುತ್ತದೆ. ಸ್ವತಂತ್ರ ಆಲೋಚನೆಗೆ ತರಬೇತಿ ಕೊಡಬೇಕು. ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಳಬೇಕು. ಚರ್ಚೆ, ತರ್ಕಕೂಟಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಮಾಡಬೇಕು. ಗಂಡು ಹೆಣ್ಣು ಸಮಾನರು ಎಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ‌ಇಬ್ಬರಿಗೂ ಸಮಾನ ಅವಕಾಶಗಳಿರಬೇಕು. ಇವರು ಹೇಳುವ ಶೈಕ್ಷಣಿಕ ಸಿದ್ಧಾಂತವು ಪ್ರಾಚೀನತೆ ಮತ್ತು ಆಧುನಿಕತೆಗಳ ಸಾಮರಸ್ಯದ ಸಂಗಮದಂತಿದೆ. ಚರಿತ್ರೆಯ ಬಗೆಗೆ ಅಪಾರ ಗೌರವ ಹಾಗೂ ಭವಿಷ್ಯದ ಬಗೆಗೆ ಅಪಾರ ಭರವಸೆ- ಈ ಎರಡೂ ಜೀವಂತ ಶಕ್ತಿಯನ್ನು ಒಂದುಗೂಡಿಸಿ ನಮಗೆ ಬಳುವಳಿಯಾಗಿ ನೀಡಿದ ರಾಧಾಕೃಷ್ಣನ್ ನಮಗೆ ಯಾವತ್ತಿಗೂ ಮುಖ್ಯರಾಗುತ್ತಾರೆ.

ಅವಮಾನ, ಕೀಳರಿಮೆ, ಗೊಂದಲದ ಮನಸ್ಸುಗಳಿಗೆ ತನ್ನ ನಡೆ ನುಡಿಗಳಿಂದ ಮುದವನ್ನಿತ್ತ ರಾಧಾಕೃಷ್ಣನ್ ತಮ್ಮ” ಸತ್ಯಕ್ಕಾಗಿ ನನ್ನ ಅನ್ವೇಷಣೆ” ಯಲ್ಲಿ ಬರೆದುಕೊಂಡ ಮಾತಿದು:”ಮನುಷ್ಯನ ಬದುಕಿನಲ್ಲಿ ಬೇಸರ ತರುವ ಸಂಗತಿಯೆಂದರೆ ಬಡವರು, ದೀನರು, ಅಧೈರ್ಯವಂತರು, ಸಂಕಟಕ್ಕೊಳಗಾದವರು ಎಲ್ಲ ಇರುವ ಈ ಜಗತ್ತಿನ ಜನರ ನೋವಿನಲ್ಲಿ ತಾನು ಹೆಚ್ಚು ಪಾಲು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು. ಇಡೀ ಬಾಳನ್ನು ಮೌನದಲ್ಲಿ ಸಾಗಿಸಬೇಕಾದರೂ ಚಿಂತೆಯಿಲ್ಲ; ಆಗಾಗ ಮಗುವೊಂದನ್ನು ನೋಡಿ ಮುಗುಳ್ನಗೆ ನಗುವುದು, ಮತ್ತೊಬ್ಬರಿಗೆ ಹರ್ಷವಾಗುವಂತೆ, ಅವನ ಹೃದಯದಲ್ಲಿ ಹೊಸ ಭರವಸೆ ಚಿಗುರುವಂತೆ ಸಂತಯಿಸುವುದು ಇಷ್ಟು ಸಾಧ್ಯವಾದರೆ ಸಾಕು”.

ಅಂಧಕಾರ ನಿರೋಧತಾ ಗುರುರಿತ್ಯಭಿಧೀಯತೆ- ಅಂಧಕಾರವೆಂದರೆ ಕೇವಲ ಬೌದ್ಧಿಕ ಅಜ್ಞಾನ ಅಷ್ಟೇ ಅಲ್ಲ. ಆಧ್ಯಾತ್ಮಿಕ ಅಂಧಕಾರವನ್ನು ಯಾರು ನಿವಾರಣೆ ಮಾಡುತ್ತಾರೋ ಅವರೇ ಗುರುಗಳು. ಇದು ಪ್ರತಿಯೊಬ್ಬ ಶಿಕ್ಷಕ ಅಥವಾ ಗುರು ಕೇಳಿಕೊಳ್ಳಬೇಕಾದ ಆಂತರ್ಯದ ಪ್ರಶ್ನೆ. “ಭವಿಷ್ಯದ ಪ್ರಜೆಗಳು ಸಿದ್ಧವಾಗುವುದು ತರಗತಿಯಲ್ಲಿ” ಎಂಬ ಅಬ್ದುಲ್ ಕಲಾಂ ಮಾತು ಸ್ಮರಣೀಯ. ಮನೆ ಮತ್ತು ಶಾಲೆ ಈ ಕಾರ್ಯವನ್ನು ಅತ್ಯಂತ ಜತನದಿಂದ ಮಾಡಬಹುದು ಎಂಬ ನಂಬಿಕೆ ನನ್ನಲ್ಲಿ ಬಲವಾಗಿದೆ. “ಸಾಕ್ಷರ ವಿಪರೀತತ್ವೆ ರಾಕ್ಷಸೊ ಭವತಿ ಧ್ರುವಮ್”- ಕೇವಲ ಸಾಕ್ಷರರಾಗಿದ್ದು ನೈತಿಕತೆ ಇಲ್ಲವಾದರೆ, ವಿವೇಕವನ್ನು ಸಂಪಾದಿಸದಿದ್ದರೆ ನಾವು ರಾಕ್ಷಸರಾಗಬಹುದು. ಜ್ಞಾನವು ವಿಜ್ಞಾನದೊಂದಿಗೆ ಸಹಯೋಗ ನಡೆಸಬೇಕು. ಅಂದಾಗ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ವ್ಯಕ್ತಿ, ಮನೆ, ಸಮುದಾಯ, ಸರ್ಕಾರ ಈ ದಿಸೆಯಲ್ಲಿ ಒಂದಾಗಿ ಕೆಲಸ ಮಾಡಬೇಕು. ಸಂಕುಚಿತತೆ, ಸ್ವಾರ್ಥ, ನೇತ್ಯಾತ್ಮಕ ಬುದ್ಧಿಯಿಂದ ಯಾವುದೂ ಔನ್ನತ್ಯವನ್ನು ಕಾಣುವುದಿಲ್ಲ. ತಿಳಿವಳಿಕೆ ಮತ್ತು ದಯೆ ಎಲ್ಲರಿಗೂ ಎಲ್ಲದರಲ್ಲೂ ಇರಬೇಕಾದ ಅನಿವಾರ್ಯತೆ ದಟ್ಟವಾಗಿ ಇದೆ.

ಮಾನವೀಯತೆಯನ್ನೇ ಜೀವಸತ್ತ್ವವನ್ನಾಗಿಸಿಕೊಂಡು ಅಂತರ್ಮುಖಿಯಾಗಿ ಶ್ರೇಷ್ಠ ಬದುಕನ್ನು ಬಾಳಿದ ಶಿಕ್ಷಕರ ಶಿಕ್ಷಕ ಆದರ್ಶ ಶಿಕ್ಷಕ, ಈ ನೆಲವನ್ನು ಗಾಢವಾಗಿ ಪ್ರೀತಿಸಿ ಆಕಾಶಕ್ಕೆ ಏರಿದ ಡಾ. ರಾಧಾಕೃಷ್ಣನ್ ನಿಸ್ಸಂಕೋಚವಾಗಿ ಮಹಾನ್ ಮಾನವತಾವಾದಿ. ಅವರಿಂದಿಗೆ ಬದುಕಿದ್ದರೆ ೧೩೨ ವರ್ಷಗಳಾಗಿರುತ್ತಿತ್ತು. ಅವರು ಬೋಧಿಸಿದ ಜೀವನಮೌಲ್ಯಗಳನ್ನು ಜೀವಂತವಾಗಿಸಿಕೊಳ್ಳುವುದರಲ್ಲೇ ಭಾರತದ ಭವಿಷ್ಯವಿದೆ.