ಕಲೆ ವಿಶ್ವ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ: ಮೆರ್ಲಿ ಬರ್ಲಾನ್

ಮಣಿಪಾಲ: ಕಲೆ ವಿಶ್ವದಾದ್ಯಂತ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ವ ಶಾಂತಿಯ ಅಂತರರಾಷ್ಟ್ರೀಯ ಮಹಿಳಾ ಒಕ್ಕೂಟ (WFWPI) ಯುಎನ್ ಸಂಬಂಧಗಳ (ನ್ಯೂಯಾರ್ಕ್) ನಿರ್ದೇಶಕಿ ಮೆರ್ಲಿ ಬರ್ಲಾನ್ ಹೇಳಿದರು. ಅವರು ವಿಶ್ವ ಶಾಂತಿಯ ಅನ್ವೇಷಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ ಮಣಿಪಾಲದ ವಿಶೇಷಚೇತನ ಮಕ್ಕಳ ವಿಶೇಷ ಮನೆಯಾದ ‘ಆಸರೆ’ಯನ್ನು ಬೆಂಬಲಿಸುವ ಸಾಂಸ್ಕೃತಿಕ ಸಂಜೆ ‘ಆರ್ಟ್ ಫಾರ್ ಪೀಸ್’ ಕಾರ್ಯಕ್ರಮದ ಅಂಗವಾಗಿ ಆನ್‌ಲೈನ್‌ನಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಾಹೆಯ ಜಿಸಿಪಿಎಎಸ್ ನೀಡುತ್ತಿರುವ ಸೇವೆಗಳು ಮತ್ತು ಇಲ್ಲಿ ಅಭ್ಯಸಿಸುವ ಕೋರ್ಸ್‌ಗಳನ್ನು ಶ್ಲಾಘಿಸಿದ ಅವರು ಇಲ್ಲಿ ಶಾಂತಿಯನ್ನು ಹೇಗೆ ಕಲೆಗಳ ಮೂಲಕ ಸಂಪರ್ಕಿಸಬಹುದು ಎಂಬುದು ಸ್ಪಷ್ಟವಾಗಿ ಅರಿವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆಯ ಜನರಲ್ ಸರ್ವಿಸಸ್ ನ ನಿರ್ದೇಶಕ ಕರ್ನಲ್ ಪ್ರಕಾಶ್ ಚಂದ್ರ, ಭಾರತವು ಬುದ್ಧ, ಟ್ಯಾಗೋರ್ ಮತ್ತು ಗಾಂಧೀಜಿಯವರ ಶಾಂತಿ ಪರಂಪರೆಯನ್ನು ಹೊಂದಿದೆ, “ನಾವು ಶಕ್ತಿ ಕೇಂದ್ರದಿಂದ ಶಾಂತಿಯತ್ತ ಮಾತನಾಡಬೇಕು” ಎಂದರು.

ಆಸರೆ ಆಡಳಿತ ಮಂಡಳಿಯ ಅಧ್ಯಕ್ಷ ಕೆ ಎಸ್ ಜೈ ವಿಟ್ಟಲ್ ಅವರು ವಿಶೇಷವಾಗಿ ಆಸರೆಯನ್ನು ಬೆಂಬಲಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಜಿಸಿಪಿಎಎಸ್ ಗೆ ಧನ್ಯವಾದ ಅರ್ಪಿಸಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ ಜೀವನದ ಪ್ರತಿಯೊಂದು ಹಂತದಲ್ಲೂ ಹಿಂಸೆ ಸರ್ವವ್ಯಾಪಿಯಾದಾಗ ಕಲೆ ದೇಶಗಳ ನಡುವೆ ಸೇತುವೆಗಳನ್ನು ಹೇಗೆ ನಿರ್ಮಿಸುತ್ತದೆ ಎಂಬುದನ್ನು ವಿವರಿಸಿದರು.

ಇಕೋಸೋಪಿ, ಎಸ್ಥೆಟಿಕ್ಸ್, ಪೀಸ್ ಮತ್ತು ಆರ್ಟ್ ಮೀಡಿಯಾದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಆಸರೆಯನ್ನು ಬೆಂಬಲಿಸುವ ಸಲುವಾಗಿ ‘ಶಾಂತಿಗಾಗಿ ಕಲೆ’ ಕಾರ್ಯಕ್ರಮವನ್ನು ನಡೆಸಿದರು. ಮುಖ್ಯವಾಗಿ ನೃತ್ಯ ಮತ್ತು ಸಂಗೀತ ಕಚೇರಿಗಳು ಒಳಗೊಂಡ ಕಾರ್ಯಕ್ರಮದಲ್ಲಿ ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡ್ಯಾನ್ಸ್‌ನ ವಿದುಷಿ ಭ್ರಮರಿ ಶಿವಪ್ರಕಾಶ್, ಗಾಯಕಿ ಶ್ರಾವ್ಯ ಎಸ್ ಬಾಸ್ರಿ, ದರ್ಪಣ ಡ್ಯಾನ್ಸ್ ಅಕಾಡೆಮಿಯ ರಮ್ಯಾ ಮತ್ತು ರಕ್ಷಾ ಉಡುಪಿ, ಜಿಸಿಪಿಎಎಸ್ ವಿದ್ಯಾರ್ಥಿಗಳಾದ ಶಿಖಾ ರಾಣಾ, ಶ್ರವಣ್ ಬಾಸ್ರಿ, ಅಪೂರ್ವ ಕೆಎನ್, ಚಿನ್ಮಯಿ ವಿ ಬಾಳ್ಕರ್ ಮತ್ತು ಸಾಗರ್ ಅಡಾ ನೃತ್ಯ ಮತ್ತು ಸಂಗೀತ ಕಛೇರಿಗಳನ್ನು ಪ್ರಸ್ತುತಪಡಿಸಿದರು.