ಫುಟ್ ಬಾಲ್ ಮಾಂತ್ರಿಕ ಮೆಸ್ಸಿ ಮಿಂಚಿನ ಆಟ: ಫ್ರಾನ್ಸ್ ಅನ್ನು ಮಣಿಸಿ 36 ವರ್ಷಗಳ ಬಳಿಕ ವಿಶ್ವಕಪ್ ಎತ್ತಿದ ಅರ್ಜೆಂಟೀನಾ

120 ನಿಮಿಷಗಳ ಕಾಲ 3-3 ಸಮಾನ ಗೋಲ್ ಗಳ ರೋಚಕ ಪಂದ್ಯದ ನಂತರ ಅರ್ಜೆಂಟೀನಾ ಪೆನಾಲ್ಟಿಯಲ್ಲಿ ಫ್ರಾನ್ಸ್ ಅನ್ನು 4-2 ಗೋಲುಗಳಿಂದ ಸೋಲಿಸಿ 36 ವರ್ಷಗಳ ಬಳಿಕ ಮೂರನೇ ವಿಶ್ವಕಪ್ ಅನ್ನು ಗೆದ್ದಿತು. ಅರ್ಜೆಂಟೀನಾ ಲಿಯೋನೆಲ್ ಮೆಸ್ಸಿ ಮತ್ತು ಏಂಜೆಲ್ ಡಿ ಮಾರಿಯಾ ಮೂಲಕ 2-0 ಮುನ್ನಡೆ ಸಾಧಿಸಿದರೆ, ದ್ವಿತೀಯಾರ್ಧದಲ್ಲಿ 97 ಸೆಕೆಂಡುಗಳಲ್ಲಿ ಫ್ರಾನ್ಸ್ ಅನ್ನು ಮರಳಿ ಲಯಕ್ಕೆ ಮರಳಿಸಿದ್ದು ಕೈಲಿಯನ್ ಎಂಬಪ್ಪೆ.

ಹೆಚ್ಚುವರಿ ಸಮಯದಲ್ಲಿ ಮೆಸ್ಸಿ ಮತ್ತೊಮ್ಮೆ ಗೋಲ್ ಹೊಡೆದರೆ, ಎಂಬಪ್ಪೆ ತಾನೂ ಒಂದು ಗೋಲ್ ಹೊಡೆದು ತಿರುಗೇಟು ನೀಡಿದರು. ಅಂತಿಮವಾಗಿ ಪೆನಾಲ್ಟಿ ಶೂಟ್ ಔಟ್ ನಲ್ಲಿ 4-2 ಗೋಲುಗಳಿಂದ ವಿಜಯ ಸಾಧಿಸಿದ ಅರ್ಜೆಂಟೀನಾ ತಂಡ ವಿಶ್ವಕಪ್ ಚಾಂಪಿಯನ್ ಎನಿಸಿಕೊಂಡಿದೆ.

Image

ಗೋಟ್ ಮೆಸ್ಸಿ, ಏಳು ಬಾರಿ ಬ್ಯಾಲನ್ ಡಿ’ಓರ್ ವಿಜೇತ ತಂಡದ ನಾಯಕ, ಫಿಫಾ ವಿಶ್ವಕಪ್‌ನ ಎಲ್ಲಾ ನಾಕೌಟ್ ಹಂತಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಮತ್ತೊಮ್ಮೆ ಬರೆದಿದ್ದಾರೆ. 2022 ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಆಡುವ ಮೂಲಕ, ಮೆಸ್ಸಿ ಜರ್ಮನಿಯ ಲೋಥರ್ ಮ್ಯಾಥೌಸ್ ಅವರನ್ನು ಹಿಂದಿಕ್ಕಿ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಆಟಗಾರರೆಂಬ ದಾಖಲೆಗೂ ಪಾತ್ರರಾಗಿದ್ದಾರೆ. ಮೆಸ್ಸಿ ಅವರು ಫ್ರಾನ್ಸ್‌ನ ಸ್ಟಾರ್-ಸ್ಟ್ರೈಕರ್ ಕೈಲಿಯನ್ ಎಂಬಪ್ಪೆ ಅವರನ್ನು ವಿಶ್ವಕಪ್‌ನ ಅಗ್ರ ಸ್ಕೋರರ್ ಪಟ್ಟಿಯಲ್ಲಿ ಹಿಂದಕ್ಕೆ ತಳ್ಳಿ ತಮ್ಮ ಹೆಸರಿಗೆ ಆರು ಗೋಲುಗಳನ್ನು ಬರಸಿಕೊಂಡಿದ್ದಾರೆ. 12 ಗೋಲುಗಳ ಮೂಲಕ ಮೆಸ್ಸಿ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪರ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ನಿರ್ಮಿಸಿದ್ದಾರೆ. ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ ಅಸಿಸ್ಟ್ ದಾಖಲಿಸಿದ ಏಕೈಕ ಆಟಗಾರ ಮೆಸ್ಸಿ. ಅವರು ಅಸಿಸ್ಟ್‌ಗಳ ವಿಷಯದಲ್ಲಿ ಬ್ರೆಜಿಲ್‌ನ ಲೆಜೆಂಡರಿ ಸ್ಟಾರ್ ಪೀಲೆಗಿಂತ ಕೇವಲ ಒಂದು ಅಸಿಸ್ಟ್ ಹಿಂದಿದ್ದಾರೆ.