ನೀವು ಗಂಡು ಮಗುವಿನ ಪೋಷಕರೇ? ಜೀವನದಲ್ಲಿ ಗೆಲ್ಲಲು ಈ ವಿಷಯಗಳನ್ನು ತಪ್ಪದೇ ಕಲಿಸಿ!

ಭಾವನೆಗಳನ್ನು ಮರೆಮಾಚಬಾರದು

“ಗಂಡಸರು ಅಳಬಾರದು” ಎಂಬ ಕಲ್ಪನೆಯಿಂದ ದೂರವಿರಿ. ದುಃಖ, ಭಯ, ಆತಂಕ ಅಥವಾ ಒತ್ತಡವನ್ನು ಹಂಚಿಕೊಳ್ಳುವುದು ಸಹಜ. ಕೋಪ ಬಂದಾಗ ಹಿಂಸೆಯ ಬದಲು ಮಾತಿನ ಮೂಲಕ ಸಮಸ್ಯೆ ಬಗೆಹರಿಸಬೇಕು. ಗಂಡು ಮಕ್ಕಳೂ ಮನುಷ್ಯರೇ, ಅವರಿಗೂ ಭಾವನೆಗಳಿವೆ. ಆ ಭಾವನೆಗಳನ್ನು ಸೂಕ್ತವಾಗಿ ವ್ಯಕ್ತಪಡಿಸಲು ಕಲಿಸಿಕೊಡಿ.

‘ಒಪ್ಪಿಗೆ’ (Consent) ಎಂಬ ಪದದ ಮಹತ್ವ ತಿಳಿಸಿ

ಚಿಕ್ಕ ವಯಸ್ಸಿನಿಂದಲೇ, ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಕಲಿಸುವುದರೊಂದಿಗೆ, ಯಾವುದೇ ವಿಷಯದ ಕುರಿತು ಇತರರ ಒಪ್ಪಿಗೆ ಇಲ್ಲದೇ ಏನೂ ಮಾಡಬಾರದು ಎಂಬುದನ್ನು ತಿಳಿಸಿಕೊಡಿ. ಯಾರಾದರೂ “ಬೇಡ” ಎಂದರೆ ಅದನ್ನು ಗೌರವಿಸಬೇಕು ಎಂಬುದನ್ನು ಕಲಿಸಿ.

  • ಬಲವಂತವಾಗಿ ಯಾರನ್ನೂ ಮುಟ್ಟಬಾರದು.
  • ಸ್ನೇಹ, ಆಟ ಅಥವಾ ಯಾವುದೇ ಸಂಬಂಧದಲ್ಲೂ ಎದುರಿನ ವ್ಯಕ್ತಿಯ ಇಚ್ಛೆಗೆ ಗೌರವ ನೀಡಬೇಕು.
  • ಇತರರ ವೈಯಕ್ತಿಕ ಗಡಿಗಳನ್ನು (Personal Boundaries) ಅರ್ಥಮಾಡಿಕೊಳ್ಳಬೇಕು.

ಮನೆ ಕೆಲಸ ಗಂಡು-ಹೆಣ್ಣು ಎಂಬ ಭೇದವಿಲ್ಲ

ಅಡುಗೆ, ಪಾತ್ರೆ ತೊಳೆಯುವುದು, ಬಟ್ಟೆ ಮಡಚುವುದು, ಮನೆ ಸ್ವಚ್ಛಗೊಳಿಸುವುದು ಇವು ಹೆಣ್ಣುಮಕ್ಕಳ ಕೆಲಸ ಮಾತ್ರವಲ್ಲ. ಮಗನಿಗೂ ಈ ಕೌಶಲ್ಯಗಳನ್ನು ಕಲಿಸಿ. ಹೆಣ್ಣು ಮಕ್ಕಳೂ ಗಂಡಸರಿಗೆ ಸರಿ ಸಮನಾಗಿ ಕೆಲಸ ಮಾಡುವುದರಿಂದ, ಮನೆಯ ಹೊರಗೂ, ಒಳಗೂ, ದುಡಿಯುವುದರಿಂದ, ಕೃಷಿ ಕೆಲಸಗಳಲ್ಲೂ ಕೈ ಜೋಡಿಸುವುದರಿಂದ ಮನೆಕೆಲಸಗಳಲ್ಲಿ ಗಂಡಸರ ಸಹಾಯ ನಿರೀಕ್ಷಿಸುವುದು ತಪ್ಪಲ್ಲ.

ಹೆಣ್ಣುಮಕ್ಕಳ ಪಿರಿಯಡ್ಸ್ ಬಗ್ಗೆ ಸರಿಯಾದ ಮಾಹಿತಿ ನೀಡಿ

ಪಿರಿಯಡ್ಸ್ (ಮುಟ್ಟಿನ ಚಕ್ರ) ಯಾವುದೇ “ನಾಚಿಕೆ” ಅಥವಾ “ಅಶುದ್ಧ” ವಿಷಯವಲ್ಲ. ಇದು ಮಹಿಳೆಯ ದೇಹದಲ್ಲಿ ನಡೆಯುವ ಸಹಜ ಜೈವಿಕ ಪ್ರಕ್ರಿಯೆ ಎಂಬುದನ್ನು ಮಗನಿಗೆ ಅರ್ಥಮಾಡಿಸಿ.

  • ಪಿರಿಯಡ್ಸ್ ಸಮಯದಲ್ಲಿ ಕೆಲವರಿಗೆ ನೋವು, ಆಯಾಸ ಅಥವಾ ಅಸ್ವಸ್ಥತೆ ಉಂಟಾಗಬಹುದು.
  • ಈ ಸಮಯದಲ್ಲಿ ಯಾರನ್ನೂ ಹಾಸ್ಯ ಮಾಡಬಾರದು ಅಥವಾ ಅವಮಾನಿಸಬಾರದು.
  • ಮನೆಯ ಮಹಿಳೆಯರಿಗೆ ಅಗತ್ಯವಿದ್ದರೆ ಸಹಾಯ ಮಾಡುವ ಮನೋಭಾವ ಬೆಳೆಸಬೇಕು.
  • ಪಿರಿಯಡ್ಸ್ ಕುರಿತು ತಪ್ಪು ಕಲ್ಪನೆಗಳ ಬದಲಿಗೆ ವೈಜ್ಞಾನಿಕ ಅರಿವು ಮೂಡಿಸಿ.

ಮಹಿಳೆಯರನ್ನು ಗೌರವಿಸುವ ಭಾಷೆ ಬಳಸಿ

ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡುವುದು, ಅವಹೇಳನಕಾರಿ ಪದಗಳನ್ನು ಬಳಸುವುದು ಅಥವಾ ಅಸಭ್ಯ ಹಾಸ್ಯ ಮಾಡುವುದು ತಪ್ಪು ಎಂಬುದನ್ನು ತಿಳಿಸಿ.

ಆನ್‌ಲೈನ್ ಜವಾಬ್ದಾರಿ ಕಲಿಸಿ

ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಸುವಾಗ:

  • ಯಾರ ಫೋಟೋ ಅಥವಾ ವಿಡಿಯೋವನ್ನು ಅನುಮತಿ ಇಲ್ಲದೆ ಹಂಚಬಾರದು.
  • ಸೈಬರ್ ಕಿರುಕುಳ ಅಥವಾ ಬೆದರಿಕೆ ನೀಡಬಾರದು.
  • ಇತರರ ಗೌಪ್ಯತೆಯನ್ನು ಗೌರವಿಸಬೇಕು.

ಎಲ್ಲರನ್ನೂ ಸಮಾನವಾಗಿ ಕಾಣಲು ಕಲಿಸಿ

ಜಾತಿ, ಧರ್ಮ, ಭಾಷೆ, ಬಣ್ಣ ಅಥವಾ ಆರ್ಥಿಕ ಸ್ಥಿತಿ ಆಧರಿಸಿ ಯಾರನ್ನೂ ಕೀಳಾಗಿ ಕಾಣಬಾರದು ಎಂಬುದು ಗಮನದಲ್ಲಿರಲಿ.

ಹಣ ಮತ್ತು ಜವಾಬ್ದಾರಿ

ಹಣದ ಮೌಲ್ಯ, ಉಳಿತಾಯ, ದುಡಿಮೆಯ ಮಹತ್ವ ಹಾಗೂ ಇತರರಿಗೆ ಸಹಾಯ ಮಾಡುವ ಗುಣ ಬೆಳೆಸಿರಿ. ಗಂಡು ದುಡಿಯುವುದು, ಕುಟುಂಬದ ಅಗತ್ಯಗಳನ್ನು ನೋಡಿಕೊಳ್ಳುವುದು ಅನಿವಾರ್ಯ. ಅದನ್ನು ಮನಗಾಣಿಸಿ.

ಕ್ಷಮೆ ಕೇಳುವುದೂ ಒಂದು ಶಕ್ತಿ

ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಂಡು “ಕ್ಷಮಿಸಿ” ಎಂದು ಹೇಳುವುದು ದುರ್ಬಲತೆಯಲ್ಲ, ಅದು ಉತ್ತಮ ವ್ಯಕ್ತಿತ್ವದ ಲಕ್ಷಣ.