ವಿಶ್ವಚಾಂಪಿಯನ್‌ ಡ್ಯಾನ್ಸ್‌ ಸ್ಪೋರ್ಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಮಣಿಪಾಲದ ಅರ್ಚನಾ ಜೈವಿಠಲ್‌

ಉಡುಪಿ: ಆಸ್ಟ್ರಿಯಾದ ಗ್ರಾಜ್‌ನಲ್ಲಿ ಆ. 20ರಿಂದ ಆರಂಭವಾಗಲಿರುವ ವಿಶೇಷ ಒಲಿಂಪಿಕ್ಸ್‌ ಡ್ಯಾನ್ಸ್‌ ಸ್ಪೋರ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಣಿಪಾಲದ ಅರ್ಚನಾ ಜೈವಿಠಲ್‌ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಆಸ್ಟ್ರಿಯಾ, ಚೆಕ್ ರಿಪಬ್ಲಿಕ್‌, ಇಸ್ಟೊನಿಯಾ, ಜರ್ಮನಿ, ಗ್ರೀಸ್‌, ಐಸ್‌ಲ್ಯಾಂಡ್‌, ಲಿಥುನಿಯಾ, ನಾರ್ತ್‌ ಮೆಸಿಡೊನಿಯಾ, ನಾರ್ವೆ, ಸ್ಲೊವೆಕಿಯಾ, ಉಕ್ರೇನ್, ಅಮೆರಿಕಾ ಹಾಗೂ ಭಾರತ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸುತ್ತಿವೆ.

ಅರ್ಚನಾ ಜೈವಿಠಲ್‌ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ 90 ಸೆಕೆಂಡ್‌ಗಳ ಏಕ ವ್ಯಕ್ತಿ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮಾಹೆ ಹಾಗೂ ಅರ್ಚನಾ ಟ್ರಸ್ಟ್‌ ಜಂಟಿಯಾಗಿ ವಿಶೇಷ ಮಕ್ಕಳಿಗಾಗಿ ಸ್ಥಾಪಿಸಿರುವ ಆಸರೆ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ.

2013ರಲ್ಲಿ ನಡೆದ ಎಸ್‌ಒಎಪಿ ಗೇಮ್ಸ್‌ ಹಾಗೂ 2019ರಲ್ಲಿ ಅಬುದಾಬಿಯಲ್ಲಿ ನಡೆದ ವಿಶ್ವಗೇಮ್ಸ್‌ ಈಜು ಸ್ಪರ್ಧೆಯಲ್ಲಿ ಅರ್ಚನಾ ಕಂಚಿನ ಪದಕ ಪಡೆದಿದ್ದರು. 2015ರಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಹಾಗೂ ಅಂಗವಿಕಲರ ಸಬಲೀಕರಣ ಇಲಾಖೆ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.