ಕಾರ್ಕಳ: ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾಗಿ ಗುತ್ತಿಗೆ ಆಧಾರದ ಮೇಲೆ ಡಾ. ಸಾಹಿತಿರಮ್ಯ ಅವರನ್ನು ನೇಮಕ ಮಾಡಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಸಂದೀಪ್ ಕುಡ್ವ ತಿಳಿಸಿದ್ದಾರೆ.
ಕಾರ್ಕಳ ತಾಲೂಕಿನ ಸುಮಾರು 50 ಗ್ರಾಮಗಳ ಮಹಿಳೆಯರು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಆಗಮಿಸುತ್ತಿದ್ದು, ಕಳೆದ ಮೂರು ವರ್ಷಗಳ ಹಿಂದೆ ಇಲ್ಲಿ ಕಾರ್ಯನಿರ್ವಹಿಸಿದ್ದ ಹೆರಿಗೆ ತಜ್ಞ ಡಾ. ಗಣೇಶ್ ಭಟ್ ಅವರ ಅವಧಿಯಲ್ಲಿ ತಿಂಗಳಿಗೆ ಸರಾಸರಿ 100 ರಿಂದ 150 ಹೆರಿಗೆಗಳು ದಾಖಲಾಗುತ್ತಿದ್ದರು. ಕಾರ್ಕಳ ಮಾತ್ರವಲ್ಲದೆ ಬೆಳ್ತಂಗಡಿ, ಮೂಡುಬಿದಿರೆ ಹಾಗೂ ಕಾಪು ಭಾಗಗಳಿಂದಲೂ ಗರ್ಭಿಣಿಯರು ಈ ಆಸ್ಪತ್ರೆಗೆ ಬರುತ್ತಿದ್ದರು.
ಆದರೆ ಅವರ ವರ್ಗಾವಣೆಯ ಬಳಿಕ ಸಮರ್ಪಕ ಹೆರಿಗೆ ತಜ್ಞರ ಕೊರತೆಯಿಂದ ಹೆರಿಗೆಗಳ ಸಂಖ್ಯೆ ಇಳಿಮುಖವಾಗಿತ್ತು. ತಜ್ಞರ ಲಭ್ಯತೆ, ಸ್ಪಂದನೆಯ ಕೊರತೆ ಹಾಗೂ ಸಮಯಕ್ಕೆ ಸರಿಯಾಗಿ ಸೇವೆ ಸಿಗದ ಕಾರಣ ಅನೇಕರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗುತ್ತಿತ್ತು.
ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆಗೆ ಆಸ್ಪತ್ರೆ ವೆಚ್ಚ ಹೊರತುಪಡಿಸಿ ಸುಮಾರು ₹15 ಸಾವಿರದವರೆಗೆ ಖರ್ಚಾಗುತ್ತಿದ್ದು, ಇದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಹೊರೆಯಾಗಿತ್ತು. ಇದೀಗ ಡಾ. ಸಾಹಿತಿರಮ್ಯ ಅವರ ನೇಮಕದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ಸೇವೆ ಮತ್ತಷ್ಟು ಬಲಗೊಳ್ಳಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

















