ಉಡುಪಿ: ಕೃಷಿ ಇಲಾಖೆ ವತಿಯಿಂದ ಆತ್ಮ ಯೋಜನೆಯಡಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರೈತರ ಸಾಧನೆಯನ್ನು ಗುರುತಿಸಿ ಪುರಸ್ಕರಿಸಲು ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಆಸಕ್ತ ಗುಂಪು ಪ್ರಶಸ್ತಿಗೆ ಅರ್ಹ ಕೃಷಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿಯಲ್ಲಿ ಸಮಗ್ರ ಬೆಳೆ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ಧಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ತಂತ್ರಜ್ಞಾನ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು, ಕುರಿ, ಮೊಲ ಮುಂತಾದವುಗಳ ಸಾಕಾಣಿಕೆ ಚಟುವಟಿಕೆಗಳಲ್ಲಿ ಕೃಷಿಕರು ಭಾಗವಹಿಸಬಹುದಾಗಿದೆ.
ಅರ್ಹ ಹಾಗೂ ಆಸಕ್ತ ರೈತರು ಸಂಬಂಧ ಪಟ್ಟ ತಾಲೂಕಿನ ಕೃಷಿ ನಿರ್ದೇಶಕರ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಪಡೆದು ಅಕ್ಟೋಬರ್ 10 ರ ಒಳಗೆ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ತಲುಪಿಸಬಹುದು.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾ ಜಂಟಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.