ಹುಳಿ ಹುಳಿ ಅಪ್ಪೇಹುಳಿ!: ಉತ್ತರ ಕನ್ನಡದ ಸ್ಪೆಷಲ್ ರುಚಿಯನ್ನು ಈ ಮಳೆಗಾಲದಲ್ಲಿ ಮಾಡಿ ಸವೀರಿ

ಮಾವಿನ ಹಣ್ಣು ತಿನ್ನಲು ತುಂಬಾ ರುಚಿ.‌ ಮಾವು ಮೆಚ್ಚದವರು ಯಾರಿದ್ದಾರೆ?! ಅಬಾಲ ವೃದ್ಧರಿಗೂ ಮಾವು ಪ್ರಿಯ. ಇಂಥ ಮಾವಿನ ಕಾಯಿಂದ ತಯಾರಿಸುವ ರುಚಿಯಾದ ರೆಸಿಪಿಯೊಂದರ ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಗುರುಗಣೇಶ್ ಭಟ್ ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಈ ಸ್ಪೆಷಲ್ ಅಪ್ಪೇಹುಳಿಯನ್ನು ಈ ಮಳೆಗಾಲದಲ್ಲಿ ಮಾಡಿ ತಿನ್ನಲು ಮರೆಯಬೇಡಿ.

ಅಪ್ಪೇಹುಳಿ ಮಾಡೋದ್ ಹೇಗೆ?

ಅಪ್ಪೇಹುಳಿ ತಯಾರಿಸಲು ಏನೂ ಬೇಡ ಅಂದರೂ ನಡೆಯುತ್ತೆ!ಮಾವಿನ ಕಾಯಿ, ನೀರು, ನಾಲ್ಕು ಮೆಣಸು, ಒಂದು ಒಗ್ಗರಣೆ-  ಇಷ್ಟಿದ್ದರೆ ಸಾಕು! ರುಚಿಯಾದ ಅಪ್ಪೆಹುಳಿ ತಯಾರಿಸಬಹುದು. ಇಂಗು ಸಿಕ್ಕರೆ ಮಂಗನೂ ರುಚಿಯಾದ ಅಡುಗೆ ಮಾಡುತ್ತಂತೆ! ಈ ಮಾತು ಅಪ್ಪೆಹುಳಿ ಮಾಡುವಾಗ ನೆನಪಾದರೆ ನಾನಂತೂ ಹೊಣೆಗಾರನಲ್ಲ.

ಮಾವಿನಕಾಯಿಯನ್ನು ಮಿದು ಆಗುವಷ್ಟು ಬೇಯಿಸಿ. ತಣಿಯಲು ಹದಿನೈದು ನಿಮಿಷ ಬಿಡಿ. ನಂತರ ಚೆನ್ನಾಗಿ ಹಿಸುಕಿ. ಅದರ ತಿರುಳು ನೀರಲ್ಲಿ ಒಂದಾಗಬೇಕು. 

ಹುಳಿ ನೀರಿಗೆ ಸಾಸಿವೆ, ಅರಿಶಿನ, ಇಂಗು, ಹಸಿ ಮೆಣಸಿನ ಬಾಯಲ್ಲಿ ನೀರೂರಿಸುವ ಒಗ್ಗರಣೆ ಲೇಪಿಸಿ ತಕ್ಕಷ್ಟು ಉಪ್ಪು ಸಕ್ಕರೆ ಉದುರಿಸಿದರೆ  ನಿಮ್ಮ ಅಪ್ಪೇಹುಳಿ ತಯಾರು! ಮಳೆಯಲ್ಲಿ ಬಾಯಿ ಚಪ್ಪರಿಸುತ್ತ ಕುಡಿಯಬಹುದು, ಬಿಸಿ ಅನ್ನಕ್ಕೆ ಕಲಸಿಕೊಂಡು ಮೆಲ್ಲಲೂಬಹುದು.  ತಿಂದು ಕುಡಿಯಿರಿ ಅಥವಾ ಕುಡಿದು ತಿನ್ನಿರಿ!

ಗುರುಗಣೇಶ್ ಭಟ್