ಕೊನೆಯ ಹೆಣ್ಣುಮಗುವಾಗಿರಲೆಂದು ‘ಅಂತಿಮ್’ ಎಂದು ಹೆಸರಿಟ್ಟರೆ ಕುಸ್ತಿಯಲ್ಲಿ ಚಿನ್ನ ಗೆದ್ದ ‘ಮೊದಲ’ ಭಾರತೀಯ ಮಹಿಳೆ ಎಂಬ ಸಾಧನೆ ಮೆರೆದ ಚಿನ್ನದ ಹುಡುಗಿ

ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 17 ವರ್ಷದ ಹರಿಯಾಣದ ಕುಸ್ತಿಪಟು ಅಂತಿಮ್ ಪಂಗಲ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ. 53 ಕೆಜಿ ವಿಭಾಗದಲ್ಲಿ ಕಜಕಿಸ್ತಾನ್‌ನ ಅಟ್ಲಿನ್ ಶಗಾಯೆವಾ ವಿರುದ್ಧ 8-0 ಅಂತರದಲ್ಲಿ ಜಯ ಗಳಿಸಿ ಈ ಸಾಧನೆ ಮಾಡಿದರು. ಈ ಚಿನ್ನದ ಪದಕವು ತನ್ನದೇ ಆದ ರೀತಿಯಲ್ಲಿ ಐತಿಹಾಸಿಕವಾಗಿದೆ ಏಕೆಂದರೆ ಭಾರತವು ಯು20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಕುಸ್ತಿಯಲ್ಲಿ ಯಾವುದೇ ಚಿನ್ನದ ಪದಕವನ್ನು ಗೆದ್ದಿಲ್ಲ.

ಹೆಣ್ಣು ಮಕ್ಕಳೆಂದರೆ ಮೂಗು ಮುರಿಯುವ ಹರಿಯಾಣದ ಬಘಾನಾ (ಹಿಸ್ಸಾರ್) ಕುಟುಂಬದಲ್ಲಿ ಮೂರು ಹೆಣ್ಣು ಮಕ್ಕಳ ನಂತರ ನಾಲ್ಕನೆಯವಳಾಗಿ ಜನಿಸಿದ ಅಂತಿಮ್ ಪಂಗಲ್ ಕೊನೆಯ ಹೆಣ್ಣು ಮಗಳಾಗಿರಲಿ ಎನ್ನುವ ಕಾರಣಕ್ಕೆ ಅವಳಿಗೆ ‘ಅಂತಿಮ್’ ಎನ್ನುವ ಹೆಸರಿಡಲಾಯಿತು. ಯಾವ ಹುಡುಗಿಗೆ ‘ಅಂತಿಮ್’ ಎನ್ನುವ ಹೆಸರಿಡಲಾಯಿತೋ ಆ ಹುಡಿಗಿ ಇಂದು ಯು-20 ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ‘ಪ್ರಪ್ರಥಮ’ ಭಾರತೀಯ ಮಹಿಳಾ ಕುಸ್ತಿ ಪಟುವಾಗಿ ಹೊರಹೊಮ್ಮಿ, ದೇಶಕ್ಕೇ ಕೀರ್ತಿ ತಂದಿದ್ದಾರೆ. ಅಂತಿಮ್ ನ ಪೋಷಕರ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ.

ಯು20 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸವನ್ನು ಬರೆದ ಖೇಲೋ ಇಂಡಿಯಾ ಪದಕ ವಿಜೇತ ಅಂತಿಮ್ ಪಂಗಲ್ ಬಗ್ಗೆ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಟ್ವೀಟ್‌ನಲ್ಲಿ ಹೆಮ್ಮೆ ವ್ಯಕ್ತಪಡಿಸಿದರು. 14 ಪದಕಗಳೊಂದಿಗೆ ಈವೆಂಟ್‌ನಲ್ಲಿ ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ ಎಂದು ಅವರು ಟ್ವೀಟಿಸಿದ್ದಾರೆ

ಈ ಸಂದರ್ಭದಲ್ಲಿ 4 ನೇ ಇಂಡಿಯನ್ ಓಪನ್ ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022 ನಲ್ಲಿಯೂ ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಕ್ಕಾಗಿ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್ ಮತ್ತು ಡಿಸ್ಕಸ್ ಎಸೆತಗಾರ ಯೋಗೇಶ್ ಕಥುನಿಯಾ ಅವರನ್ನು ಕೂಡಾ ಅಭಿನಂದಿಸಿದ್ದಾರೆ.