ಸಿದ್ದು ಹಿಂದೂ ವಿರೋಧಿ ಹೇಳಿಕೆಗಳೇ ಕಾಂಗ್ರೆಸ್ ಅಧ:ಪತನಕ್ಕೆ ನಾಂದಿ ಹಾಡಲಿದೆ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಮೈಯೆಲ್ಲಾ ಹಿಂದೂ ವಿರೋಧಿ ವಿಷ ತುಂಬಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ ಹೇಳಿಕೆಗಳೇ ಕಾಂಗ್ರೆಸ್ ಅಧ:ಪತನಕ್ಕೆ ನಾಂದಿ ಹಾಡಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಅಪ್ಪಟ ದೇಶ ಭಕ್ತ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಹೆಸರೆತ್ತಲೂ ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸಮಾಜ ಒಡೆಯುವ ದುಷ್ಕೃತ್ಯದಲ್ಲಿ ತೊಡಗಿರುವುದು ಜಗಜ್ಜಾಹೀರಾಗಿದೆ.

‘ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಬ್ಯಾನರ್ ಯಾಕೆ ಹಾಕಿದ್ದೀರಿ’ ಎಂದಿರುವ ಸಿದ್ದುಗೆ ಹಿಂದೂ ಏರಿಯಾಕ್ಕೆ ಹೋಗುವ ನೈತಿಕತೆ ಇದೆಯೇ? ‘ವಸುಧೈವ ಕುಟುಂಬಕಂ’ ಎಂಬ ತತ್ವದಲ್ಲಿ ನಂಬಿಕೆ ಇರಿಸಿರುವ ಬಿಜೆಪಿ ಇಡೀ ಭಾರತವನ್ನೇ ಒಂದು ಕುಟುಂಬವೆಂದು ಭಾವಿಸುತ್ತದೆ. ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಚಿಂತನೆಯೊಂದಿಗೆ ಎಲ್ಲಾ ವರ್ಗದ ಜನತೆಯ ಅಭ್ಯುದಯಕ್ಕಾಗಿ ವಿವಿಧ ಜನಪರ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಪರ ಆಡಳಿತದೊಂದಿಗೆ ಶ್ರಮಿಸುತ್ತಿದೆ. ಸದಾ ಒಂದೇ ವರ್ಗದ ಓಲೈಕೆಯಲ್ಲಿ ತೊಡಗಿರುವ ಸಿದ್ದರಾಮಯ್ಯನವರಿಗೆ ಇದನ್ನೆಲ್ಲಾ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ರಾಜ್ಯದೆಲ್ಲೆಡೆ ವಿಪರೀತ ನೆರೆ ಹಾವಳಿಯಿಂದ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ತನ್ನ 74ನೇ ವಯಸ್ಸಿನಲ್ಲಿ ರಾಜಕೀಯ ಕಾರಣಕ್ಕಾಗಿಯೇ 75ನೇ ಹುಟ್ಟು ಹಬ್ಬ ಎಂದು ಆಚರಿಸಿ ‘ಸಿದ್ದರಾಮೋತ್ಸವ’ದ ಗುಂಗಿನಲ್ಲಿ ತೇಲಾಡುತ್ತಿದ್ದ ಸಿದ್ದರಾಮಯ್ಯ, ಎಲ್ಲಾ ಮುಗಿದ ಮೇಲೆ ನಾಟಕೀಯವಾಗಿ ಮಳೆ ಹಾನಿ ವೀಕ್ಷಣೆಗೆಂದು ಕೊಡಗಿಗೆ ತೆರಳಿರುವುದು ಹಾಗೂ ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತನಿಂದಲೇ ತನ್ನ ಕಾರಿಗೆ ಮೊಟ್ಟೆ ಹೊಡೆಸಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿರುವುದನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತನ್ನ ಪಕ್ಷದ ಕಾರ್ಯಕರ್ತನ ವಿರುದ್ಧವೇ ಆ.26ರಂದು ಕೊಡಗಿಗೆ ದಂಡೆತ್ತಿ ಹೋಗುವ ವಿಚಾರ ಸಿದ್ದು ವಿಚಲಿತ ಮನಸ್ಥಿತಿಯನ್ನು ಸಾಬೀತುಪಡಿಸಿದೆ. ಅದೇ ದಿನ ಕೊಡಗು ಬಿಜೆಪಿ, ಶಾಸಕರ ನೇತೃತ್ವದಲ್ಲಿ ಲಕ್ಷಾಂತರ ಕೊಡವರನ್ನು ಸೇರಿಸಿ ‘ಜನ ಜಾಗೃತಿ ಸಮಾವೇಶ’ ಹಮ್ಮಿಕೊಂಡಿರುವುದು ಸಿದ್ದರಾಮಯ್ಯ ತಂತ್ರಗಾರಿಕೆಯನ್ನು ತಲೆಕೆಳಗಾಗಿಸಿದೆ.

ಈ ಎಲ್ಲಾ ಬೆಳವಣಿಗೆಗಳು ಸಿದ್ದು ಮಹತ್ವಾಕಾಂಕ್ಷೆಯ ‘ಸಿದ್ದರಾಮೋತ್ಸವ’ದ ಉತ್ಸಾಹವನ್ನು ನೀರಿನಲ್ಲಿ ಹೋಮ ಇಟ್ಟಂತೆ ಮಾಡಿರುವುದಂತೂ ಸತ್ಯ. ‘ಸಂವಿಧಾನ ಅಪಾಯದಲ್ಲಿದೆ’ ಎಂದು ಒದರುತ್ತಾ ತಾನೊಬ್ಬನೇ ‘ಸಂವಿಧಾನದ ಮಹಾನ್ ರಕ್ಷಕ’ ಎಂದು ಪೋಸ್ ಕೊಡುವ ಸಿದ್ದರಾಮಯ್ಯ, ಪ್ರಜಾಸತ್ತಾತ್ಮಕ ಪ್ರತಿಭಟನೆಗೆ ಅವಕಾಶ ನೀಡಿರುವ ಸಂವಿಧಾನವನ್ನೇ ವಿರೋಧಿಸಿ, ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂಬಂತೆ ವರ್ತಿಸುತ್ತಿರುವುದು ವಾಸ್ತವ.

‘ಮುಸ್ಲಿಂ ಏರಿಯಾ’ ವ್ಯಾಖ್ಯಾನವನ್ನು ಹುಟ್ಟುಹಾಕಿರುವ ಸಿದ್ದು ‘ಪ್ರತ್ಯೇಕತೆಯ ಮಾನಸಿಕತೆ’ ನಾಡಿನ ಸೌಹಾರ್ದತೆಗೆ ತುಂಬಾ ಅಪಾಯಕಾರಿ ಎನಿಸಿದ್ದು, ಇಂತಹಾ ಏರಿಯಾ ದೇಶಕ್ಕೆ ಸ್ವಾತಂತ್ರ್ಯ ದೊರೆತಿರುವ ಸಂದರ್ಭದಲ್ಲೇ ಅಧಿಕಾರದ ಹಪಾಹಪಿಗಳ ಸಂಚಿನಿಂದ ದೇಶವನ್ನು ತುಂಡರಿಸುವ ಮೂಲಕ ಸೃಷ್ಟಿಯಾಗಿರುವುದನ್ನು ಸಿದ್ದರಾಮಯ್ಯ ಮರೆತಿರುವುದು ದುರದೃಷ್ಟಕರ.

ಸಮರ್ಥ ನಾಯಕತ್ವದ ಕೊರತೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಆಂತರಿಕ ಬೇಗುದಿಯಿಂದ ಬೆಂದಿದ್ದು, ಚುನಾವಣೆ ಗೆಲ್ಲುವ ಮೊದಲೇ ಮುಖ್ಯಮಂತ್ರಿ ಪದವಿಗಾಗಿ ನಡೆಯುತ್ತಿರುವ ಪೈಪೋಟಿ ‘ಕೂಸು ಹುಟ್ಟುವ ಮುನ್ನ ಕುಲಾವಿ’ ಹೊಲಿಸಿದಂತಿದೆ. ಮಾಸ್ ಲೀಡರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ನೀಡಿರುವ ಸ್ಥಾನಮಾನ, ಹೊಸ ಚೈತನ್ಯದಿಂದ ರಾಜಾಹುಲಿಯ ಪುನರಾಗಮನ ಸಿದ್ದರಾಮಯ್ಯ, ಡಿಕೆಶಿ ಸಹಿತ ವಿರೋಧ ಪಕ್ಷಗಳ ನಾಯಕರ ನಿದ್ದೆಗೆಡಿಸಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟಿತ ಪ್ರಯತ್ನದ ಮೂಲಕ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಬಿಜೆಪಿ ಮಗದೊಮ್ಮೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.