ಮತ್ತೊಂದು ಆಘಾತ: ಖಾಸಗಿ ಕಮರ್ಷಿಯಲ್ ಗ್ಯಾಸ್ ದರದಲ್ಲೂ ಭಾರೀ ಏರಿಕೆ!

ಬೆಂಗಳೂರು: ವಾಣಿಜ್ಯ ಅನಿಲ ಸಿಲಿಂಡರ್‌ಗಳ ದಿಢೀರ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಸಿಲಿಂಡರ್‌ಗಳನ್ನು ಹೆಚ್ಚಾಗಿ ಬಳಸುವ ಸಣ್ಣ ಮತ್ತು ದೊಡ್ಡ ಹೋಟೆಲ್‌ಗಳು, ಬೇಕರಿಗಳು ಹಾಗೂ ಆಹಾರ ವ್ಯವಹಾರಸ್ಥರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಿ ಸ್ವಾಮ್ಯದ ಕಂಪನಿಗಳ ನಂತರ ಖಾಸಗಿ ಕಮರ್ಷಿಯಲ್ ಗ್ಯಾಸ್ ದರದಲ್ಲೂ ಭಾರೀ ಏರಿಕೆ ಕಂಡು ಬಂದಿದೆ.

ನಿನ್ನೆ ಸರ್ಕಾರಿ ಸ್ವಾಮ್ಯದ ಕಮರ್ಷಿಯಲ್ ಗ್ಯಾಸ್ ದರ 45% ಏರಿಕೆ ಆಗಿತ್ತು. ಇದೀಗ ಖಾಸಗಿ ಕಮರ್ಷಿಯಲ್ ಗ್ಯಾಸ್ ದರ 50% ರಿಂದ 60% ಏರಿಕೆ ಕಂಡಿದೆ. ಕಂಪನಿಗಳಿಗೆ ತಕ್ಕಂತೆ ಖಾಸಗಿ ಕಮರ್ಷಿಯಲ್ ಸಿಲಿಂಡರ್ ದರ ಇಂದಿನಿಂದಲೇ ಏರಿಕೆ ಆಗಲಿದೆ. 17kg ಖಾಸಗಿ ಕಮರ್ಷಿಯಲ್ ಗ್ಯಾಸ್ ಬೆಲೆ ಇಂದಿನಿಂದ 4,500 ರೂಪಾಯಿಗೆ ಏರಿಕೆ ಕಂಡಿದೆ.

ನಿನ್ನೆವರೆಗೆ 2,300 ರೂಪಾಯಿ ಇದ್ದ ಸಿಲಿಂಡರ್ ದರ ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಜ್ಯೋತಿ ಗ್ಯಾಸ್, ಟೋಟಲ್ ಎನರ್ಜೀಸ್, ಸೂಪರ್ ಗ್ಯಾಸ್ ಸೇರಿದಂತೆ ಹಲವು ಖಾಸಗಿ ಕಂಪನಿಗಳು ದರ ಪರಿಷ್ಕರಣೆ ಮಾಡಿವೆ.

ಮೇ 1ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು 991 ರೂಪಾಯಿಗಳಷ್ಟು ಹೆಚ್ಚಿಸಲಾಗಿದ್ದು, ಇದರ ನೇರ ಪರಿಣಾಮವಾಗಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ತಿಂಡಿ, ಊಟ, ಕಾಫಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಇನ್ಮುಂದೆ ಹೊರಗೆ ಊಟ ಮಾಡುವುದು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.

ಇದರ ಪರಿಣಾಮ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚುವರಿ ಖರ್ಚಿನ ಹೊರೆ ಬೀಳಲಿದೆ. ದೇಶೀಯ ಎಲ್‌ಪಿಜಿ ಸಿಲಿಂಡರ್ ದರವೂ 40ರಿಂದ 50 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಅನಿಲ ದರ ಏರಿಕೆಯಿಂದ ಗೃಹ ಬಳಕೆದಾರರಿಗೂ ಆತಂಕ ಶುರುವಾಗಿದೆ. ಕುಟುಂಬಗಳ ಅಡುಗೆ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದ್ದು, ಕೆಲವು ಕುಟುಂಬಗಳು ಪರ್ಯಾಯ ಮಾರ್ಗಗಳತ್ತ ಮುಖ ಮಾಡುವ ಪರಿಸ್ಥಿತಿ ಎದುರಾಗಬಹುದು.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತ, ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಪೂರೈಕೆ ಸಮಸ್ಯೆಗಳ ಪರಿಣಾಮವಾಗಿ ಭಾರತದಲ್ಲೂ ಇಂಧನ ದರ ಏರಿಕೆ ಭೀತಿ ಹೆಚ್ಚಾಗಿದೆ.

ಹಿಂದೆ ಅನಿಲ ಕೊರತೆಯಿಂದ ಸಾವಿರಾರು ಹೋಟೆಲ್‌ಗಳು ಬಂದ್ ಆಗಿದ್ದವು. ಇದೀಗ ಸಿಲಿಂಡರ್ ದರದ ದಿಢೀರ್ ಏರಿಕೆಯಿಂದ ಮತ್ತೆ ಹೋಟೆಲ್ ಉದ್ಯಮದಲ್ಲಿ ಆತಂಕ ಮೂಡಿದ್ದು, ಬೆಂಗಳೂರಿನ ಹಲವೆಡೆ ಕಾಫಿ, ತಿಂಡಿ ಹಾಗೂ ಊಟದ ದರ ಹೆಚ್ಚಳಕ್ಕೆ ಮಾಲೀಕರು ಚಿಂತನೆ ನಡೆಸಿದ್ದಾರೆ.