ಜನತೆಗೆ ಮತ್ತೊಂದು ಶಾಕ್, ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ

ರಾಜ್ಯದಲ್ಲಿ ಇಂಧನ ದರ ಏರಿಕೆಯ ಪರಿಣಾಮ ಇದೀಗ ಬಸ್ ಪ್ರಯಾಣ ದರದ ಮೇಲೂ ನೇರವಾಗಿ ಬಿದ್ದಿದೆ. ಡೀಸೆಲ್ ಬೆಲೆ ಲೀಟರ್‌ಗೆ 3 ರೂಪಾಯಿ ಹೆಚ್ಚಳವಾಗಿರುವುದರಿಂದ ಖಾಸಗಿ ಬಸ್ ಮಾಲೀಕರಿಗೆ ದಿನನಿತ್ಯ ಹೆಚ್ಚುವರಿ ವೆಚ್ಚದ ಭಾರ ಎದುರಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, “ಪ್ರತಿದಿನ ಒಂದು ಬಸ್‌ಗೆ ಕನಿಷ್ಠ 150 ಲೀಟರ್ ಡೀಸೆಲ್ ಅಗತ್ಯವಿರುತ್ತದೆ. ಬೆಲೆ ಏರಿಕೆಯಿಂದ ದಿನಕ್ಕೆ ಸುಮಾರು 450 ರೂಪಾಯಿ ಹೆಚ್ಚುವರಿ ಖರ್ಚಾಗುತ್ತಿದೆ. ಈ ಕಾರಣದಿಂದ ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ. ಇದರ ಹೊರೆ ಕೊನೆಗೆ ಪ್ರಯಾಣಿಕರ ಮೇಲೆಯೇ ಬೀಳಲಿದೆ” ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿನ್ನ-ಬೆಳ್ಳಿ, ಅಕ್ಕಿ ಸೇರಿದಂತೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈಗ ಬಸ್ ಟಿಕೆಟ್ ದರ ಹೆಚ್ಚಳ ಮತ್ತಷ್ಟು ಆತಂಕ ಮೂಡಿಸಿದೆ.

ಬಸ್ ದರ ಏರಿಕೆಯಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈಗಾಗಲೇ ದುಬಾರಿ ಜೀವನದಿಂದ ಸಂಕಷ್ಟದಲ್ಲಿರುವ ಜನರಿಗೆ ಈ ದರ ಏರಿಕೆ ಮತ್ತೊಂದು ಹೊರೆ ಆಗಿದೆ.