ಜೆಡ್ಡಾದಲ್ಲಿ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ ಆರಂಭ : ಮುಂದುವರಿದ ಸುಡಾನ್​ ಸಂಘರ್ಷ

ಖಾರ್ಟೂಮ್ (ಸುಡಾನ್) : ಸುಡಾನ್​ನಲ್ಲಿ ಸಶಸ್ತ್ರ ಸಂಘರ್ಷ ಮುಂದುವರೆದಿರುವ ಮಧ್ಯೆ, ಸುಡಾನ್ ಸಶಸ್ತ್ರ ಪಡೆಗಳು (ಎಸ್ ಎಎಫ್) ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (ಆರ್ ಎಸ್ ಎಫ್) ಹೊಸ ಸುತ್ತಿನ ಶಾಂತಿ ಮಾತುಕತೆ ಪುನರಾರಂಭಿಸಲು ಮುಂದಾಗಿವೆ.ಶಾಂತಿ ಮಾತುಕತೆಗಾಗಿ ಎರಡೂ ಕಡೆಗಳ ನಿಯೋಗಗಳು ಸೌದಿ ಅರೇಬಿಯಾದ ಬಂದರು ನಗರ ಜೆಡ್ಡಾಗೆ ಆಗಮಿಸಿವೆ.ಸುಡಾನ್ ಸಂಘರ್ಷ ಕೊನೆಗಾಣಿಸಲು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮತ್ತೊಂದು ಸುತ್ತಿನ ಮಾತುಕತೆಗಳು ಆರಂಭವಾಗಿವೆ.

ಏಪ್ರಿಲ್ 15 ರಿಂದ, ಎಸ್‌ಎಎಫ್ ಮತ್ತು ಆರ್​ಎಸ್‌ಎಫ್ ಬಣಗಳು ರಾಜಧಾನಿ ಖಾರ್ಟೂಮ್ ಮತ್ತು ಇತರ ಪ್ರದೇಶಗಳಲ್ಲಿ ಮಾರಣಾಂತಿಕ ಘರ್ಷಣೆಗಳಲ್ಲಿ ತೊಡಗಿವೆ. ಇದರ ಪರಿಣಾಮವಾಗಿ ಕನಿಷ್ಠ 3,000 ಜನ ಸಾವಿಗೀಡಾಗಿದ್ದು, 6,000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ. ಸಂಘರ್ಷ ನಿರತ ಬಣಗಳ ನಡುವಿನ ಮೂಲ ಭಿನ್ನಾಭಿಪ್ರಾಯಗಳಿಂದಾಗಿ ಜುಲೈನಲ್ಲಿ ನಡೆಯಬೇಕಿದ್ದ ಜೆಡ್ಡಾ ಶಾಂತಿ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಸೌದಿ ಅರೇಬಿಯಾ ಮತ್ತು ಯುಎಸ್ ಮೇ 6 ರಿಂದ ಜೆಡ್ಡಾದಲ್ಲಿ ನಡೆಯುತ್ತಿರುವ ಮಾತುಕತೆಗಳಿಗೆ ಮಧ್ಯಸ್ಥಿಕೆ ವಹಿಸಿವೆ. ಅಂದಿನಿಂದ ಹಲವಾರು ಕದನ ವಿರಾಮಗಳನ್ನು ಘೋಷಿಸಿ ಅವುಗಳನ್ನು ಉಲ್ಲಂಘಿಸಲಾಗಿದೆ. ಆದರೆ ಈ ಬಗ್ಗೆ ಎರಡೂ ಬಣಗಳು ಪ್ರತ್ಯಾರೋಪ ಮಾಡುತ್ತಿವೆ. ದೀರ್ಘಕಾಲದ ಸಂಘರ್ಷದಿಂದಾಗಿ ಸುಡಾನ್ ಒಳಗೆ ಮತ್ತು ಹೊರಗೆ ಸುಮಾರು 5.8 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಯುಎನ್ ಇಂಟರ್​ ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಹೇಳಿದೆ.

“ಮಾತುಕತೆಗಳನ್ನು ಪುನರಾರಂಭಿಸಲು ಸೌದಿ ಅರೇಬಿಯಾ ಮತ್ತು ಯುಎಸ್ ಆಹ್ವಾನಕ್ಕೆ ಪ್ರತಿಕ್ರಿಯೆಯಾಗಿ, ನಮ್ಮ ಸಂಧಾನ ನಿಯೋಗವು ಇಂದು ಜೆಡ್ಡಾಗೆ ಆಗಮಿಸಿದೆ” ಎಂದು ಅರೆಸೈನಿಕ ಪಡೆ ಹೇಳಿಕೆಯಲ್ಲಿ ತಿಳಿಸಿದೆ. “ಮತ್ತೊಂದು ಬಣವು ವಿಶ್ವಾಸಾರ್ಹತೆ, ವಾಸ್ತವಿಕತೆ ಮತ್ತು ಯುದ್ಧ ನಿಲ್ಲಿಸುವ ಇಚ್ಛಾಶಕ್ತಿಯನ್ನು ತೋರಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆದರೆ, ಬುಧವಾರ ಮಾತುಕತೆಯ ಬಗ್ಗೆ ಎಸ್​ಎಎಫ್​ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಮಾತುಕತೆಯು ಯುದ್ಧವನ್ನು ಕೊನೆಗೊಳಿಸುವ ಸಾಧನಗಳಲ್ಲಿ ಒಂದಾಗಿದೆ ಎಂಬ ಎಸ್‌ಎಎಫ್​ನ ನಂಬಿಕೆಯ ಆಧಾರದ ಮೇಲೆ, ಮಾನವೀಯ ಕಾರ್ಯಗಳಿಗೆ ಅನುಕೂಲವಾಗುವಂತೆ ಮತ್ತು ನಮ್ಮ ನಾಗರಿಕರು ಸಾಮಾನ್ಯ ಜೀವನವನ್ನು ಸಾಗಿಸಲು ಅನುಕೂಲವಾಗುವಂತೆ ಜೆಡ್ಡಾ ಘೋಷಣೆಯ ಸಂಪೂರ್ಣ ಅನುಷ್ಠಾನವನ್ನು ಪೂರ್ಣಗೊಳಿಸಲು ಜೆಡ್ಡಾಗೆ ಹೋಗುವ ಆಹ್ವಾನವನ್ನು ನಾವು ಸ್ವೀಕರಿಸಿದ್ದೇವೆ.” ಎಂದು ಹೇಳಿದೆ. ಆದರೆ ಮಾತುಕತೆಯನ್ನು ಪುನರಾರಂಭಿಸುವುದು ಎಂದರೆ ಆರ್​ಎಸ್‌ಎಫ್ ವಿರುದ್ಧದ ಸಶಸ್ತ್ರ ಸಂಘರ್ಷವನ್ನು ನಿಲ್ಲಿಸುವುದು ಎಂದರ್ಥವಲ್ಲ ಎಂದು ಅದು ಒತ್ತಿ ಹೇಳಿದೆ.