ಮೈಸೂರಿನಲ್ಲಿ ಮತ್ತೊಬ್ಬ ಮಹಿಳಾ ನರ್ಸ್ ಸಿಐಡಿ ವಶಕ್ಕೆ : ಭ್ರೂಣ ಪತ್ತೆ, ಭ್ರೂಣ ಹತ್ಯೆ ಪ್ರಕರಣ:

ಮೈಸೂರು : ಮೈಸೂರಿನ ಹೃದಯ ಭಾಗದಲ್ಲಿರುವ ಶ್ರೀ ಚಾಮುಂಡೇಶ್ವರಿ ನರ್ಸಿಂಗ್ ಹೋಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಷಾರಾಣಿಯನ್ನು ಸಿಐಡಿ ವಶಕ್ಕೆ ಪಡೆದಿದೆ. ಮಾತಾ ಆಸ್ಪತ್ರೆಯಲ್ಲಿ ನಡೆದಿರುವ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ನರ್ಸ್ ಮಂಜುಳಾ ಎಂಬಾಕೆಯನ್ನು ಈ ಮೊದಲು ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ಉಷಾರಾಣಿ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣದ ಕರಾಳ ಮುಖ ಮತ್ತಷ್ಟು ಅನಾವರಣಗೊಂಡಿದ್ದು, ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಯ ನರ್ಸ್ ಉಷಾರಾಣಿ ಎಂಬಾಕೆಯನ್ನು ಸಿಐಡಿ ತನಿಖಾ ತಂಡ ವಶಕ್ಕೆ ಪಡೆದಿದೆ.ಮೈಸೂರಿನ ಮಾತಾ ಆಸ್ಪತ್ರೆಯ ನರ್ಸ್ ಮಂಜುಳಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವ ವೇಳೆ ನೀಡಿದ ಮಾಹಿತಿ ಮೇರೆಗೆ ಮೊತ್ತೊಬ್ಬ ಮಹಿಳಾ ನರ್ಸ್ ಅನ್ನು ಸಿಐಡಿ ವಶಕ್ಕೆ ತೆಗೆದುಕೊಂಡಿದೆ.

ಚಾಮುಂಡೇಶ್ವರಿ ಆಸ್ಪತ್ರೆಯ ಮಾಲೀಕ ಜಗದೀಶ್​ರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು, ಚಾಮುಂಡೇಶ್ವರಿ ಆಸ್ಪತ್ರೆಯ ಎಲ್ಲಾ ದಾಖಲಾತಿಗಳನ್ನು ಪೊಲೀಸರಿಗೆ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಮೈಸೂರಿನ ಮತ್ತಷ್ಟು ಖಾಸಗಿ ಆಸ್ಪತ್ರೆಗಳು ಈ ಕರಾಳ ದಂಧೆಯಲ್ಲಿ ಭಾಗಿಯಾಗಿವೆಯಾ? ಎಂಬ ಪ್ರಶ್ನೆ ಉದ್ಬವವಾಗಿದೆ. ಉನ್ನತ ಮಟ್ಟದಲ್ಲಿ ತನಿಖೆಗೆ ದಿನೇಶ್ ಗುಂಡೂರಾವ್ ಕ್ರಮ : ಇತ್ತೀಚೆಗೆ ಈ ಪ್ರಕರಣ ಸಂಬಂಧ ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲಮನೆಯಲ್ಲಿ ನಡೆಯುತ್ತಿದ್ದ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಘಟನಾ ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಬಂಧಿತ ವ್ಯಕ್ತಿ ಬಗ್ಗೆ ಆರೋಗ್ಯ ಇಲಾಖೆಯವರು ನಿಗಾ ಇಟ್ಟಿದ್ದರು. ಪ್ರಕರಣದಲ್ಲಿ ನಮ್ಮ ಇಲಾಖೆ ಅಧಿಕಾರಿಗಳು‌ ಭಾಗಿಯಾಗಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಪ್ರಕರಣದ ಬೆನ್ನು ಬಿದ್ದು ಪತ್ತೆ ಮಾಡಬೇಕಿತ್ತು. ಇದಕ್ಕೆ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿ ಕೆಲಸ ಮಾಡಿಲ್ಲ. ನೋಡಿದರೇ ಅಧಿಕಾರಿಗಳ ಬೇಜವಾಬ್ದಾರಿ ಇದೆ ಅನ್ನೋದು ಕಾಣುತ್ತದೆ. ಈ ಬಗ್ಗೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮವಹಿಸಲು ಹೊಸ ಕಾರ್ಯಕ್ರಮ ರೂಪಿಸುತ್ತೇವೆ. ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಲು ನಾನು ಒತ್ತಾಯ ಮಾಡುತ್ತೇವೆ ಎಂದಿದ್ದರು.

ಪುಟ್ಟರಾಜು ಎಂಬಾತ ಮಧ್ಯವರ್ತಿಯಾಗಿ ಉಷಾರಾಣಿ ಬಳಿಗೆ ಗರ್ಭಪಾತಕ್ಕೆ ಮುಂದಾಗುತ್ತಿದ್ದ ಗರ್ಭಿಣಿಯರನ್ನು ಕರೆತರುತ್ತಿದ್ದ ಮಾಹಿತಿ ಬಹಿರಂಗವಾಗಿದೆ.ಇದೇ ಖಾಸಗಿ ನರ್ಸಿಂಗ್ ಹೋಂನಲ್ಲಿ ಹೆಡ್ ನರ್ಸ್ ಉಷಾರಾಣಿ, ಎಗ್ಗಿಲ್ಲದೇ ಗರ್ಭಿಣಿಯರ ಗರ್ಭಪಾತ ಮಾಡುತ್ತಾ ಬಂದಿದ್ದಳು. ಮೈಸೂರಿನ ಶಾಂತಲಾ ಚಿತ್ರಮಮಂದಿರದ ಹಿಂಭಾಗದಲ್ಲಿ ಜನನಿಬಿಡ ಸ್ಥಳದಲ್ಲಿ ಇರುವ ಖಾಸಗಿ ಆಸ್ಪತ್ರೆಯಲ್ಲೇ ನಡೆಯುತ್ತಿದ್ದ ಗರ್ಭಿಣಿಯರು ಗರ್ಭಪಾತದಿಂದ, ಇಡೀ ನಾಗರೀಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದ್ದು, ಸಿಐಡಿ ತಂಡ ತನಿಖೆಯನ್ನು ತೀವ್ರಗೊಳಿಸಿದೆ.