ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ.
ನಾನು ಚಾಮರಾಜಪೇಟೆ ಅಳಿಯ ಅಂತ ಹೇಳಿಕೆ ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದೆದುರು ಇಂದು ಬಾದಾಮಿಯ ನೂರಾರು ಬೆಂಬಲಿಗರು ಜಮಾಯಿಸಿದ್ದು, ಬದಾಮಿಯಿಂದಲೇ ಮುಂದಿನ ಬಾರಿಯೂ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ತಾವು ಬಾದಾಮಿ ಬಿಟ್ಟು ಎಲ್ಲಿಯೂ ಸಹ ಚಾಮರಾಜಪೇಟೆಯಿಂದ ಚುನಾವಣೆಗೆ ನಿಲ್ತೀನಿ ಅಂತ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನನಗೆ ಕೋಲಾರ, ಚಾಮರಾಜಪೇಟೆ, ಕೊಪ್ಪಳದಲ್ಲಿ ಎಲ್ಲಾ ಕಡೆಯಿಂದ ಚುನಾವಣೆಗೆ ನಿಲ್ಲುವಂತೆ ಆಹ್ವಾನಿಸಿದ್ದಾರೆ. ಆದರೆ ನಾನು ಎಲ್ಲಿಯೂ ಸಹ ಚಾಮರಾಜಪೇಟೆಯಿಂದ ನಿಲ್ತೀನಿ ಅಂತ ಹೇಳಿಲ್ಲ. ವಿಧಾನಸಭೆಯಲ್ಲಿ ಚರ್ಚೆ ಆದಾಗ ಅಶೋಕ್ ಕೇಳಿದಾಗ ನಾನು ಬದಾಮಿ ಶಾಸಕ ಅಂತ ಹೇಳಿದ್ದೆ ಎಂದರು. ಈ ವೇಳೆ ಅಭಿಮಾನಿಗಳು ಭಾರೀ ಕರತಾಡನ ಹರ್ಷೋದ್ಗಾರದ ಮೂಲಕ ಸಂಭ್ರಮಿಸಿದರು.
ಬದಾಮಿ ಕ್ಷೇತ್ರದ ಜನರನ್ನು ಮರೆಯಲು ಸಾಧ್ಯವೇ ಇಲ್ಲ. ಬೇರೆ ಕಡೆ ನಿಲ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಒಬ್ಬ ಶಾಸಕನಾದವನು ದಿನನಿತ್ಯ ಜನರ ಕಷ್ಟಸುಖಗಳಿಗೆ ಸ್ಪಂದಿಸಬೇಕು. ನಾನು ಅಲ್ಲಿಗೆ ಹೆಚ್ಚು ಬರಲು ಆಗ್ತಿಲ್ಲ ಎಂದರು. ಬದಾಮಿ ಕ್ಷೇತ್ರದ ಜನ ಬಹಳ ಒಳ್ಳೆಯವರು. ನಿಮ್ಮನ್ನು ಖುಷಿಪಡಿಸಲು ಈ ಮಾತು ಹೇಳ್ತಿಲ್ಲ. ಇನ್ನೂ ಎರಡು ವರ್ಷಗಳಿವೆ ಏನೇನೆಲ್ಲ ಮಾಡಲು ಸಾಧ್ಯವೋ ಎಲ್ಲ ಮಾಡ್ತೀನಿ. ನಾನು ನಿಮಗೆ ನೀರು, ಆಸ್ಪತ್ರೆ, ಜವಳಿ ಪಾರ್ಕ್ ಕೊಡಿಸಿರೋದೆಲ್ಲ ಒಬ್ಬ ಶಾಸಕನಾಗಿ ಮಾಡಬೇಕಾದ ಕೆಲಸ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.
ನಾನು ಈ ಹಿಂದೆ ಅಸೆಂಬ್ಲಿ ಅಲ್ಲಿ ಹೇಳಿದ ಮಾತಿಗೆ ಬದ್ಧ. ಬಾದಾಮಿಯಿಂದಲೇ ಸ್ಪರ್ಧಿಸುವೆ ಎಂದು ಇದೇ ವೇಳೆ ಸಿದ್ದರಾಮಯ್ಯ ಬಹಿರಂಗ ಘೋಷಣೆ ಮಾಡಿದ್ದಾರೆ.