ಗಂಗಾವತಿಯಲ್ಲಿ ಆದಿ ಮಾನವ ಕಾಲಕ್ಕೆ ಸೇರಿದ್ದ 2 ಸಾವಿರ ವರ್ಷ ಹಿಂದಿನ ವಾಸದ ಮತ್ತೊಂದು ನೆಲೆ ಪತ್ತೆ

ಗಂಗಾವತಿ : ಇಲ್ಲಿನ ಹಿರೇಬೆಣಕಲ್​ನಲ್ಲಿ ಸುಮಾರು ಎರಡು ಸಾವಿರ ವರ್ಷದ ಆದಿ ಮಾನವ ವಾಸದ ನೆಲೆಗಳು ಪತ್ತೆಯಾದ ಬೆನ್ನಲ್ಲೇ ಇದೀಗ ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅದೇ ಕಾಲಮಾನಕ್ಕೆ ಸೇರಿದ್ದಿರಬಹುದು ಎಂದು ಊಹಿಸಲಾದ ಆದಿ ಮಾನವರ ವಾಸದ ಮತ್ತೊಂದು ನೆಲೆ ಪತ್ತೆಯಾಗಿದೆ.

ಗಂಗಾವತಿಯ ಹೆಚ್.ಆರ್.ಜಿ ನಗರದ ಸಮೀಪ ಇರುವ ಬೆಟ್ಟದಲ್ಲಿ ಆದಿ ಮಾನವರ ಕಾಲಮಾನಕ್ಕೆ ಸೇರಿದ್ದು ಎನ್ನಲಾದ ಮಾನವನ ನೆಲೆ ಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ತಾಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇತಿಹಾಸಕಾರರು ಅಥವಾ ಸಂಶೋಧಕರು ಪತ್ತೆಹಚ್ಚಬೇಕಿದೆ.

ಕೊಪ್ಪಳದಿಂದ ಬಂದರೆ ಹೇಮಗುಡ್ಡದ ಬಳಿಕ ಸಿಗುವ ಟೋಲ್ ಪ್ಲಾಜಾದಿಂದ ಸ್ವಲ್ಪ ದೂರಕ್ಕೆ ಬರಬೇಕು. ಗಂಗಾವತಿಯಿಂದ ಹೋದರೆ ತುಂಗಭದ್ರಾ ಎಡದಂಡೆ ಕಾಲುವೆ ಬಳಿಕ ಸಿಗುವ ಹೆಚ್.ಆರ್.ಜಿ. ನಗರದಿಂದ ಈ ಜಾಗಕ್ಕೆ ಹೋಗಬಹುದು. ರಾಜ್ಯ ಹೆದ್ದಾರಿಯ ಪಕ್ಕ ಇರುವ ನಾಲ್ಕಾರು ಹೊಲಗಳನ್ನು ದಾಟಬೇಕು. ಬಳಿಕ ಸಿಗುವ ಬೆಟ್ಟಕ್ಕೆ ಹೊಂದಿಕೊಂಡಿರುವ ಚಂದ್ರಪಡಿಯಮ್ಮ ಎಂಬ ಗುಹೆಯ ಪಕ್ಕದಲ್ಲಿರುವ ದೇವಸ್ಥಾನದ ಜಾಡು ಹಿಡಿದು ಬೆಟ್ಟದ ಮೇಲಕ್ಕೆ ಹೋಗಬೇಕು. ಅತ್ಯಂತ ಕಿರಿದಾದ ಮತ್ತು ದುರ್ಗಮವಾಗಿರುವ ಬೆಟ್ಟದ ಮೇಲೆ ಹೋಗಲು ಚಿರತೆ, ಕರಡಿಯಂತಹ ವನ್ಯ ಪ್ರಾಣಿಗಳ ದಾಳಿಯ ಆತಂಕವಿದೆ. ಹೀಗಾಗಿ, ಅಲ್ಲಿಗೆ ತಲುಪಲು ಸ್ಥಳೀಯರ ಮಾರ್ಗದರ್ಶನ ಅಗತ್ಯ.

ಗಿಣಿಗೇರಾ-ಗಂಗಾವತಿ ರಾಜ್ಯ ಹೆದ್ದಾರಿಯ ಟೋಲ್​ಗೇಟ್ ಸಮೀಪದ ಹೆಚ್.ಆರ್.ಜಿ. ನಗರದ ಇಟಗಿ ಭೀಮಮ್ಮ ದೇವಸ್ಥಾನದ ಮುಂದಿರುವ ಬೃಹತ್ ವಿಶಾಲವಾದ ಬೆಟ್ಟದ ತುತ್ತ ತುದಿಯಲ್ಲಿ ಈ ಆದಿ ಮಾನವನ ನೆಲೆ ಪತ್ತೆಯಾಗಿದೆ. ಮೋರೇರ್ ಬೆಟ್ಟ ಎಂದು ಕರೆಯಲಾಗುವ ಈ ತಾಣದಲ್ಲಿ ಆದಿ ಮಾನವನಿಗೆ ಸೇರಿದ್ದು ಎಂದು ನಂಬಲಾಗಿರುವ ನೆಲೆ ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಹಲವು ಗುಹೆಗಳು ಪತ್ತೆಯಾಗಿವೆ. ಆದರೆ, ಗುಹೆಯಲ್ಲಿ ಏನಾದರೂ ಐತಿಹಾಸಿಕ ಅಂಶಗಳಿವೆಯೇ ಎಂಬುದರ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ.

ಆಕೃತಿ ರಚನೆಯ ವಿವರ : ಆದಿ ಮಾನವ ನೆಲೆಯಲ್ಲಿ ಕಂಡು ಬರುವ ಈ ವಿಶಿಷ್ಟ ಆಕೃತಿಗಳು ಕುತೂಹಲ ಮೂಡಿಸುತ್ತವೆ. ನಾಲ್ಕು ದಿಕ್ಕಿನಲ್ಲಿ ಬೃಹತ್ ಕಲ್ಲು ಬಂಡೆಗಳನ್ನು ನಿಲ್ಲಿಸಿ ಅವುಗಳ ಮೇಲೆ ಚಪ್ಪಟೆಯಾಕಾರದ ಬಂಡೆ ಮುಚ್ಚಲಾಗಿದೆ. ಒಳಗಡೆ ಚಪಟ್ಟೆಯಾಕಾರದ ಕೆಲ ಕಲ್ಲುಗಳನ್ನು ಇಡಲಾಗಿದೆ. ಶಿಲಾಯುಗಕ್ಕೂ ಮುನ್ನವೇ ಅಂದರೆ ಎರಡು ಸಾವಿರ ವರ್ಷಗಳ ಹಿಂದೆಯೇ ಗಂಗಾವತಿ ಭಾಗದಲ್ಲಿನ ಬೆಟ್ಟ-ಗುಡ್ಡಗಳಲ್ಲಿನ ತಾಣಗಳು ಆದಿ ಮಾನವನ ಆವಾಸ ಸ್ಥಾನವಾಗಿತ್ತು ಎಂಬುವುದಕ್ಕೆ ಆಗಾಗ ಇಂತಹ ಪುರಾವೆಗಳು ಸಿಗುತ್ತಿವೆ.

ಬೆಟ್ಟದ ಮೇಲಿರುವ ಬಹುತೇಕ ಆದಿ ಮಾನವನ ನೆಲೆ, ಸಮಾಧಿಗಳು ಕುರಿಗಾಹಿ, ದನಗಾಹಿಗಳಿಂದ ನಾಶವಾಗಿವೆ. ಸುಮಾರು 20 ರಿಂದ 30ರಷ್ಟಿರುವ ಈ ನೆಲೆಗಳ ಪೈಕಿ ಕೇವಲ ಒಂದೆರಡು ಮಾತ್ರ ಸುಸ್ಥಿತಿಯಲ್ಲಿದ್ದು, ಮಿಕ್ಕವು ಶಿಥಿಲಾವಸ್ಥೆಗೆ ತಲುಪಿವೆ. ಸೂಕ್ತ ರಕ್ಷಣೆ ಇಲ್ಲದ ಪರಿಣಾಮ ಮತ್ತು ನಿರ್ಜನ ಪ್ರದೇಶದಲ್ಲಿರುವ ಕಾರಣ ನಿಧಿ ಆಸೆಗಾಗಿ ಕುರಿಗಾಹಿಗಳು ಇವುಗಳನ್ನು ನಾಶ ಮಾಡಿರುವ ಸಾಧ್ಯತೆ ಅಧಿಕವಾಗಿದೆ. ಈ ಪ್ರದೇಶಕ್ಕೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಬೇಕಿದೆ. ಮಾನವನ ಇತಿಹಾಸದ ಮೇಲೆ ಬೆಳಕು ಚಲ್ಲುವ ಇಂತಹ ವಿಶಿಷ್ಟ ಆದಿಮಾನವರ ನೆಲೆಗಳನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮ ತಾಣವಾಗಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಬೇಕಿದೆ.

“ಗಂಗಾವತಿ ಮತ್ತು ಸುತ್ತಲಿನ ಪ್ರದೇಶ ಅತ್ಯಂತ ಪ್ರಾಚೀನವಾಗಿದೆ. ತೇತ್ರಾಯುಗದ ಪೌರಾಣಿಕದೊಂದಿಗೆ ನಮ್ಮ ಇತಿಹಾಸ ಥಳುಕು ಹಾಕಿಕೊಂಡಿದ್ದು, ಈ ಭಾಗದಲ್ಲಿನ ಐತಿಹಾಸಿಕ ತಾಣಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿಸುವ ಕೆಲಸ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆಯಿಂದ ಆಗಬೇಕಿದೆ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಒತ್ತಾಯಿಸಿದ್ದಾರೆ

ಅಭಿವೃದ್ಧಿಗೆ ಒತ್ತಾಯ : ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಂಗಾವತಿಯ ಹಿರಿಯ ಉಪನ್ಯಾಸಕ ಪವನಕುಮಾರ ಗುಂಡೂರು, “ಗಂಗಾವತಿ ಸುತ್ತಲೂ ಎರಡು-ಮೂರು ಸಾವಿರ ವರ್ಷಗಳ ಹಿಂದಿನ ಆದಿಮಾನವನ ನೆಲೆಗಳಿವೆ. ಇದೀಗ ಹೆಚ್.ಆರ್.ಜಿ. ನಗರದಲ್ಲಿ ಪತ್ತೆಯಾಗಿರುವ ನೆಲೆ ಅದೇ ಕಾಲಘಟ್ಟಕ್ಕೆ ಸೇರಿರುವ ಸಾಧ್ಯತೆ ಇದ್ದು, ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕು” ಎಂದು ಒತ್ತಾಯಿಸಿದ್ದಾರೆ.

ಒಂದೊಂದು ಚಪ್ಪಟೆಯಾಕಾರದ ಬಂಡೆಗಳು ನಾಲ್ಕರಿಂದ ಐದು ಅಡಿ ಉದ್ದ, ಅಷ್ಟೇ ಪ್ರಮಾಣದ ಎತ್ತರ ಇವೆ. ನಾಲ್ಕು ದಿಕ್ಕಿನಲ್ಲಿ ಚಪ್ಪಟೆಯಾಕಾರದ ಬಂಡೆಗಳನ್ನು ನಿಲ್ಲಿಸಿ ಅವುಗಳ ಮೇಲೆ ವೃತ್ತಾಕಾರವನ್ನು ಹೋಲುವ ಮಾದರಿ ಬಂಡೆಯನ್ನು ಮುಚ್ಚಲಾಗಿದೆ. ಯಾವುದೇ ಸಾಧನ-ಸಲಕರಣೆಗಳು ಇಲ್ಲದ ಕಾಲಘಟ್ಟದಲ್ಲಿ ಆದಿ ಮಾನವರು, ಈ ಭಾರವಾದ ಕಲ್ಲುಗಳನ್ನು ಹೇಗೆ ನಿಲ್ಲಿಸಿ ಅವುಗಳ ಮೇಲೆ ಮತ್ತೊಂದು ನಿಲ್ಲಿಸಿರಬಹುದು ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ. ವಿಶಾಲವಾಗಿರುವ ಬೆಟ್ಟದ ಮೇಲಿನ ಕಲ್ಲಿನ ಪದರುಗಳನ್ನೆ ಕೊರೆದು ಈ ಸಮಾಧಿ ಅಥವಾ ನೆಲೆಗಳನ್ನು ನಿರ್ಮಿಸಿಕೊಂಡಿರುವ ಸಾಧ್ಯತೆ ಇದೆ.