ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಖೇಲೋ ಜನತಾ ವಾರ್ಷಿಕ ಕ್ರೀಡಾಕೂಟ 2023 ಅನ್ನು ಆಯೋಜಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಇವರು ವಹಿಸಿ ಪ್ರಾಸ್ತಾವಿಕವಾಗಿ ಕಾಲೇಜಿನ ಕ್ರೀಡಾ ಚಟುವಟಿಕೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಮಂಜುನಾಥ್ ಶೆಟ್ಟಿ ಗೌರವ ರಕ್ಷೆ ಸ್ವೀಕರಿಸಿ, ಕ್ರೀಡಾಜ್ಯೋತಿಯನ್ನು ಬೆಳಗಿಸಿ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಕ್ರೀಡಾಕೂಟಗಳು ಅದ್ಭುತವಾದ ವೇದಿಕೆಯಾಗಿದೆ ಎಂದು ಜನತಾ ಪದವಿ ಪೂರ್ವ ಕಾಲೇಜಿನ ಕ್ರೀಡಾ ಸಾಧನೆಯನ್ನು ಕೊಂಡಾಡಿ ಶುಭ ಹಾರೈಸಿದರು.
ಪ್ರಗತಿ ಮಹಿಳಾ ವಿವಿಧೋದ್ದೇಶ ಕೋ-ಆಪರೇಟಿವ್ ಸೊಸೈಟಿ(ರಿ) ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕುಲಾಲ್ ಧ್ವಜಾರೋಹಣವನ್ನು ನೆರವೇರಿಸಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳ ಪಾತ್ರ ಮಹತ್ತರವಾದದ್ದು ಎಂದರು.
ಸಮಾರಂಭದಲ್ಲಿ ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಂಜು ಕಾಳಾವರ, ಕಾಲೇಜಿನ ಪ್ರಾಂಶುಪಾಲ ರಮೇಶ್ ಪೂಜಾರಿ, ಬೋಧಕ-ಬೋಧಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕ ಉದಯ್ ನಾಯ್ಕ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಉಪನ್ಯಾಸಕ ಉಮೇಶ್ ನಾಯ್ಕ ವಂದಿಸಿದರು.