ಮಲಾಡ್ ಕನ್ನಡ ಸಂಘದ ವತಿಯಿಂದ ವಾರ್ಷಿಕ ಸತ್ಯನಾರಾಯಣ ಮಹಾಪೂಜೆ

ಮುಂಬಯಿ: ಮುಂಬೈ ಉಪನಗರ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಯಾದ ಮಲಾಡ್ ಕನ್ನಡ ಸಂಘ ಇದರ ವಾರ್ಷಿಕ ಧಾರ್ಮಿಕ ಕಾರ್ಯಕ್ರಮ ಸತ್ಯನಾರಾಯಣ ಮಹಾಪೂಜೆ ಏಪ್ರಿಲ್ 14ರಂದು ಸಂಘದ ಕಚೇರಿ 4ಬಿ- 21 ಯುನಿಟಿ ಅಪಾರ್ಟ್ಮೆಂಟ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಬಫ್- ಹೀರಾ ನಗರ ಮಾರ್ವೆ ರೋಡ್ ಮಲಾಡ್ ಪಶ್ಚಿಮ ಇಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ವಿಜೃಂಭಣೆಯಿಂದ ಜರುಗಿತು. ಸಂಘದ ಸದಸ್ಯ ಬಾಂಬೆ ಬಂಟ್ಸ್ ಎಸೋಶಿಯೇಶನ್ ನ ಅಧ್ಯಕ್ಷ ಸಿ.ಎ. ಸುರೇಂದ್ರ ಶೆಟ್ಟಿ ಹಾಗೂ ಪ್ರಭಾ ಸುರೇಂದ್ರ ಶೆಟ್ಟಿ ನೇತೃತ್ವದಲ್ಲಿ ವಿಷ್ಣು ಮೂರ್ತಿ ಅಡಿಗರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಆಪ್ತ ಹಿತೈಷಿ ಮಿತ್ರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ನ್ಯಾ. ಜಗದೀಶ್ ಎಸ್ ಹೆಗ್ಡೆ, ವರ್ಷಂಪ್ರತಿ ಸದಸ್ಯರ ಸಾಮೂಹಿಕ ಒಗ್ಗೂಡುವಿಕೆಯಿಂದ ಜರಗುವ ಈ ಧಾರ್ಮಿಕ ಕಾರ್ಯಕ್ರಮವು ಸಂಘ ಹಾಗೂ ಕುಟುಂಬದ ಸದಸ್ಯರ ಉದ್ಯಮ ವೃತ್ತಿ ಆರೋಗ್ಯದ ಆಶೋತ್ತರಗಳಿಗಾಗಿ ಈ ಧಾರ್ಮಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಮಲಾಡ್ ಕನ್ನಡ ಸಂಘವು ಪ್ರಾರಂಭದ ದಿನದಿಂದಲೂ ಸಾಮಾಜಿಕ ಕಾರ್ಯಕ್ರಮದ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಿಗೂ ವಿಶೇಷ ಮಹತ್ವ ನೀಡಿದೆ. ಸಂಘದ ಪ್ರತಿಯೊಂದು ಕಾರ್ಯಕ್ರಮಗಳು ಸರ್ವ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ಜರುಗುತ್ತದೆ ಎಂದು ಹೇಳಿದರು.

ಮಂಗಳಾರತಿ ಬಳಿಕ ಪೂಜೆಯಲ್ಲಿ ಭಾಗವಹಿಸಿದ ಸಿಎ ಸುರೇಂದ್ರ ಶೆಟ್ಟಿ ದಂಪತಿಗಳಿಗೆ ಹಾಗೂ ಸಂಘದ ಅಧ್ಯಕ್ಷ ನ್ಯಾ. ಜಗದೀಶ್ ಎಸ್ ಹೆಗ್ಡೆ ಮತ್ತು ಪದಾಧಿಕಾರಿಗಳಿಗೆ ಪುರೋಹಿತರು ಶ್ರೀ ದೇವರಿಂದ ಅನುಗ್ರಹಿಸಿ ಫಲಪುಷ್ಪ ಪ್ರಸಾದ ನೀಡಿ ಭಕ್ತರಲ್ಲಿ ಭಕ್ತಿಯ ಮನಸ್ಸು ಶುದ್ಧಿಗೊಂಡಾಗ ಭಗವಂತನು ಪ್ರಸನ್ನನಾಗುತ್ತಾನೆ ಜೊತೆಗೆ ಆರೋಗ್ಯ ಸುಖಶಾಂತಿ ನೆಮ್ಮದಿ ಕರುಣಿಸುತ್ತಾನೆ ಎಂದರು. ಬಳಿಕ ಪೂಜೆಯಲ್ಲಿ ಭಾಗವಹಿಸಿದ ಸರ್ವ ಸದಸ್ಯರು, ಕುಟುಂಬಸ್ಥರು ಮತ್ತು ಪರಿಸರದ ತುಳು-ಕನ್ನಡಿಗರಿಗೆಲ್ಲಾ ತೀರ್ಥ ಪ್ರಸಾದ ನೀಡಿ ಅನುಗ್ರಹಿಸಿದರು. ಬಳಿಕ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರುಗಿತು.

ಉಪಾಧ್ಯಕ್ಷ ದಯಾನಂದ ಎಂ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಆಶಾಲತಾ ಎಸ್ ಕೋಟ್ಯಾನ್, ಗೌರವ ಕೋಶಾಧಿಕಾರಿ ಶಾಂಭವಿ ಬಿ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಎಸ್ ಸಾಲ್ಯಾನ್, ಜೊತೆ ಕೋಶಾಧಿಕಾರಿ ಸಂತೋಷ್ ಕೆ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತಾ ವಿ ಭಂಡಾರಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರಣಗೌಡ ಪಾಟೀಲ್, ಕಾನೂನು ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ಎಸ್ ಬಿ ಅಮೀನ್, ‌ಸದಸ್ಯತ್ವ ನೋಂದಣಿ ವಿಭಾಗದ ಕಾರ್ಯಾಧ್ಯಕ್ಷ ಶಂಕರ್ ಆರ್ ಶೆಟ್ಟಿ, ಅಭ್ಯುದಯ ಸಹಕಾರಿ ಬ್ಯಾಂಕಿನ ಆಡಳಿತ ಕಾರ್ಯ ನಿರ್ದೇಶಕ ಪ್ರೇಮ್ ನಾಥ್ ಸಾಲ್ಯಾನ್ ಹಾಗೂ ಕಾರ್ಯಕಾರಿ ಸಮಿತಿ ಮತ್ತು ವಿವಿಧ ಉಪಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಚಿತ್ರ, ವರದಿ: ರಮೇಶ್ ಉದ್ಯಾವರ್