ಉಡುಪಿ: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಜರಗಿತು.
ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ‘ನಾವು ತೋರಿಸುವ ಪ್ರೀತಿ ತೋರ್ಪಡಿಕೆಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿರಬೇಕು. ಪ್ರೀತಿ ಮತ್ತು ಸೇವೆ ಕ್ರೈಸ್ತ ಧರ್ಮದ ಮೂಲ ತತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು’ ಮುಂದಿನ ವರ್ಷವನ್ನು ಉಡುಪಿ ಧರ್ಮಪ್ರಾಂತ್ಯದಲ್ಲಿ ಬಡವರ ವರ್ಷವಾಗಿ ಆಚರಿಸಲಾಗುತ್ತಿದ್ದು ಕಷ್ಟದಲ್ಲಿರುವವರಿಗೆ, ಬಡತನದ ನೋವಿನಲ್ಲಿರುವವರಿಗೆ ಸಹಾಯಹಸ್ತ ಚಾಚಲು ಪ್ರತಿಯೊಬ್ಬರು ಈ ವರ್ಷದದಲ್ಲಿ ಪಣತೊಡೋಣಾ ಎಂದರು.
ಪವಿತ್ರ ಬಲಿಪೂಜೆಯ ಬಳಿಕ ಧರ್ಮಗುರು ವಿಲ್ಸನ್ ಡಿಸೋಜ ಪರಮ ಪ್ರಸಾದ ಆರಾಧನೆ ನೆರವೇರಿಸಿದರು. ಬಳಿಕ ಪರಮ ಪ್ರಸಾದವನ್ನು ವಿಶೇಷವಾಗಿ ಅಲಂಕರಿಸಿದ, ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಒಯ್ದು ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚ್ನ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು. ಬ್ಯಾಂಡ್- ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ ಮೆರವಣಿಗೆ ನಡೆಯಿತು.
ಮೌಂಟ್ ರೋಜರಿ ದೈವಾಲಯದ ಸಭಾಂಗಣದಲ್ಲಿ ದೈವವಾಕ್ಯದ ಪ್ರಬೋಧನೆಯನ್ನು ಮಿಲಾಗ್ರಿಸ್ ಕಾಥೆಡ್ರಲ್ ಸಹಾಯಕ ಗುರು ವಂದನೀಯ ಫಾ. ಪ್ರದೀಪ್ ಕಾರ್ಡೋಜ ರವರು ನೀಡಿದರು. ಅವರು “ಅಪೋಸ್ತಲರ ಆತ್ಮಸ್ಫೂರ್ತಿಯಲ್ಲಿ ಧರ್ಮಕೇಂದ್ರ, ಮನೆ, ಸಮುದಾಯ ಎಲ್ಲೆಡೆ ಪರಮಪ್ರಸಾದ ಐಕ್ಯ ಕುಟುಂಬ ಕಟ್ಟುವ ಜವಾಬ್ದಾರಿ ನಮ್ಮದಾಗಿದೆ” ಎಂದು ಮನದಟ್ಟು ಮಾಡಿದರು.
ಧರ್ಮಾಧ್ಯಕ್ಷರು ಕಾರ್ಯಕ್ರಮದ ಅಂತ್ಯದಲ್ಲಿ ಪರಮಪ್ರಸಾದದ ಅಂತಿಮ ಆಶೀರ್ವಚನ ನೀಡಿ ಭಕ್ತರಿಗೆ ಆಧ್ಯಾತ್ಮಿಕ ಬಲವರ್ಧನ ಒದಗಿಸಿದರು.
ಧರ್ಮಪ್ರಾಂತ್ಯದ ಬೈಬಲ್ ಆಯೋಗದ ನಿರ್ದೇಶಕ ವಂ| ವಿಲ್ಸನ್ ಡಿಸೋಜ ಮತ್ತು ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಡಾ| ರೋಕ್ ಡಿಸೋಜ ದೈವಾರಾಧನಾ ವಿಧಿಯನ್ನು ಸಮರ್ಪಕವಾಗಿ ನಿರೂಪಿಸಿದರು. ರೊನಾಲ್ಡ್ ಸಲ್ಡಾನಾ ಧನ್ಯವಾದ ಸಲ್ಲಿಸಿದರು ಸಲ್ಲಿಸಿದರು.
ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚ್ಗಳಿಂದ ಸುಮಾರು 3000ಕ್ಕೂ ಅಧಿಕ ಭಕ್ತರು, 60ಕ್ಕೂ ಅಧಿಕ ಧರ್ಮ ಗುರುಗಳು, 100ಕ್ಕೂ ಅಧಿಕ ಧರ್ಮ ಭಗಿನಿಯರು ಭಾಗವಹಿಸಿದ್ದರು.
ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ|ಸ್ಟೀಫನ್ ಡಿಸೋಜಾ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ವಂ|ಡಾ|ಲೆಸ್ಲಿ ಡಿಸೋಜ, ವಂ|ಆಲ್ಬನ್ ಡಿಸೋಜಾ, ವಂ| ಚಾರ್ಲ್ಸ್ ಮಿನೇಜಸ್, ಧರ್ಮಪ್ರಾಂತ್ಯದ ಪಾಲನಾ ಸಮಿತಿ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.


















