ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶ್ ನ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಎಮ್ಮೆಕೆರೆ, ಪಾಂಡೇಶ್ವರದ ರಮಾ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಯಶ್ಪಾಲ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು .
ಫೆಡರೇಶನ್ ಮಹಾಸಭೆಗೆ 44 “ಬಿ” ವರ್ಗದ ಸದಸ್ಯರು ಮತ್ತು 624 “ಸಿ” ವರ್ಗದ ಸದಸ್ಯರು ಮತ್ತು ಸರಕಾರದ ಪ್ರತಿನಿಧಿಗಳು ಹಾಜರಿದ್ದರು.
ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮಾತನಾಡಿ, ಫೆಡರೇಶನ್ ವತಿಯಿಂದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಮೀನುಗಾರಿಕಾ ಕಾಲೇಜಿನಲ್ಲಿ ಮೀನುಗಾರಿಕೆಯ ಬಗ್ಗೆ ವ್ಯಾಸಂಗ ಮಾಡುವ ಸದಸ್ಯರ ಮಕ್ಕಳ ದತ್ತು ಸ್ವೀಕಾರ, ಸದಸ್ಯರಿಗೆ ಆರೋಗ್ಯ ಕಾರ್ಡು ಸೌಲಭ್ಯ ಒದಗಿಸುವುದು. ಸದಸ್ಯ ಸಹಕಾರಿ ಸಂಘಗಳ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಗಾರ, ಮೀನುಗಾರಿಕೆ ಮತ್ತು ಮೀನಿನ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಉದ್ದೇಶದಿಂದ “ಮತ್ಸ್ಯಮೇಳ” ಕಾರ್ಯಕ್ರಮ ಏರ್ಪಡಿಸುವುದು.
ಸದಸ್ಯರಿಗೆ ಫೆಡರೇಶನಿನ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ಏರ್ಪಡಿಸುವುದು. ಕಾಪು ಮತ್ತು ಹಂಗಾರಕಟ್ಟಾ ಕೇಂದ್ರಗಳಲ್ಲಿ ನೂತನವಾಗಿ ಬ್ಯಾಂಕಿಂಗ್ ವಿಭಾಗಗಳನ್ನು ತೆರೆಯುವುದು, ಕೇಂದ್ರ ಸರಕಾರದ ಆತ್ಮನಿರ್ಭರ ಭಾರತದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ಮತ್ತು ಸದಸ್ಯ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡು ಸೌಲಭ್ಯ ಒದಗಿಸುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿದ್ದು, ಕೆಲವೊಂದು ಆಯ್ದ ಕೇಂದ್ರಗಳಲ್ಲಿ ಫೆಡರೇಶನ್ ವತಿಯಿಂದ ಮತ್ಸ್ಯ ಕ್ಯಾಂಟಿನ್ ಆರಂಭಿಸುವ ಬಗ್ಗೆ ನಿರ್ಧರಿಸಲಾಯಿತು.
ಫೆಡರೇಶನಿನ ಸದಸ್ಯರಿಗೆ ಸಂಸ್ಥೆಯ ವ್ಯವಹಾರದಲ್ಲಿ ಪಾಲ್ಗೊಳುವರೇ ಅನುಕೂಲವಾಗುವಂತೆ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಸರಕಾರದ ನಿವೇಶನದಲ್ಲಿ ಪ್ರಧಾನ ಕಚೇರಿಯ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುವುದಾಗಿ ಸಭೆಗೆ ತಿಳಿಸಿದರು.
ಈ ಸಭೆಯಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ನಿತಿನ್ ಕುಮಾರ್ ಮತ್ತು ತುಳು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿರುವ ಶ್ರೀ ಯೋಗೀಶ್ ಕಾಂಚನ್, ಬೈಕಂಪಾಡಿ ಹಾಗೂ ಫೆಡರೇಶನಿನಲ್ಲಿ ಹಲವಾರು ವರ್ಷ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿರುವ ಜನಾರ್ಧನ್ ಮತ್ತು ಶ್ರೀ ಚಂದ್ರಶೇಖರ್ ಇವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್ ಕುಮಾರ್, ಶ್ರೀ ಪಾಶ್ರ್ವನಾಥ್, ಮೀನುಗಾರಿಕಾ ಉಪನಿರ್ದೇಶಕರು, ಮಂಗಳೂರು, ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ನಾಯಕ್, ಹಾಗೂ ಫೆಡರೇಶನಿನ ಆಡಳಿತ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು.