ಬೊರಿವಲಿ ಪಶ್ಚಿಮ: ಶ್ರೀ ಕ್ಷೇತ್ರ ಜಯರಾಜನಗರದ ಶ್ರೀಮಹಿಷಮರ್ಧಿನಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ

ಬೊರಿವಲಿ: ಉತ್ತರ ಮುಂಬಯಿ ಬೊರಿವಲಿ ಪಶ್ಚಿಮ ಪರಿಸರದ ಶ್ರೀ ಕ್ಷೇತ್ರ ಜಯರಾಜನಗರದ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಜರುಗುತ್ತಿರುವ ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಜೂ. 1ರಂದು ಬೆಳಿಗ್ಗೆ ಶ್ರೀದೇವಿಯ ಸನ್ನಿಧಾನದಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಯವರ ನೇತೃತ್ವದಲ್ಲಿ ಅಷ್ಟ ಬಂಧ ಬ್ರಹ್ಮಕಲಶ ಹಾಗೂ ಧಾರ್ಮಿಕ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅದ್ದೂರಿಯಿಂದ ಜರುಗಿತು. ಪೂಜಾ ವಿಧಿ ನೆರವೇರಿಸಿ ಕಲಶವುಗಳನ್ನು ಮೆರವಣಿಗೆ ಬಿರುದಾವಳಿಗಳ ಮೂಲಕ ಶ್ರೀ ಮಹಿಷಮರ್ಧಿನಿ ಆದಿ ಗಣಪತಿ ಮತ್ತು ಆಂಜನೇಯ ದೇವರಿಗೆ ಅಭಿಷೇಕ ಸಮರ್ಪಿಸಲಾಯಿತು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆ ಬೈಲು ಪ್ರದೀಪ್ ಸಿ ಶೆಟ್ಟಿ ಮಾತನಾಡಿ, ಧರ್ಮ ಜಾಗೃತಿ ನೆಲೆಗೊಂಡ ಜಾಗದಲ್ಲಿ ಧರ್ಮ ಸಂಸ್ಕೃತಿಗಳು ನೆಲೆಗೊಳ್ಳುತ್ತವೆ. ಸತತ ವಿಧಿವತ್ತವಾದ ಪೂಜೆ ಅನುಷ್ಠಾನಗಳ ಮೂಲಕ ಭಕ್ತಾದಿಗಳ ದೈನಂದಿನ ದರ್ಶನಗಳು ಪುಣ್ಯಕಾರ್ಯಾಚರಣೆಯ ಮಹಿಮೆಗಳು ಈ ಕ್ಷೇತ್ರದಲ್ಲಿ ದೃಡೀಕರಿಸಿದೆ. ಕ್ಷೇತ್ರದಲ್ಲಿ ಭಕ್ತರಿಗೆ ದಿನನಿತ್ಯ ದೇವಿಯ ದರ್ಶನ ಪಡೆಯುವ ಭಾಗ್ಯ ಒದಗಿದೆ ಎಂದು ಹೇಳಿದರು.

ಮನಸ್ಸಿನ ಲೌಕಿಕ ಪರಿಹಾರಗಳು ತಾತ್ಕಲಿಕ. ಆಧ್ಯಾತ್ಮಿಕವಾಗಿ ಸಿಗುವ ಚಿಂತನೆ ಮತ್ತು ದೇವರ ಪ್ರಾರ್ಥನೆಯಿಂದ ಮಾತ್ರ ಶಾಶ್ವತ ನೆಮ್ಮದಿ ಪ್ರಾಪ್ತವಾಗಲಿದೆ. ಭಕ್ತರು ಧನಾತ್ಮಕ ಚಿಂತನೆಯಿಂದ ಸಕಾರಾತ್ಮಕ ಆಚಾರ ವಿಚಾರಗಳಿಗೆ ಹೊಂದಿಕೊಳ್ಳುವ ಅಗತ್ಯವಿದೆ. ಈ ಕ್ಷೇತ್ರದಲ್ಲಿ ದೈನಂದಿನ ವಾರ್ಷಿಕ ಹಾಗೂ ಇನ್ನಿತರ ಧಾರ್ಮಿಕ ವೈಶಿಷ್ಟ ಪೂರ್ಣ ಕಾರ್ಯಕ್ರಮಗಳೊಂದಿಗೆ ಕ್ಷೇತ್ರ ಬೆಳಗಿದೆ. ಮುಂದೆಯೂ ಕ್ಷೇತ್ರದಿಂದ ವಿವಿಧ ಧಾರ್ಮಿಕ ಅನುಷ್ಠಾನಗಳು ಭಕ್ತರ ಕಷ್ಟ ಪರಿಹಾರಗಳನ್ನು ನಿವಾರಿಸುವಂತಾಗಲಿ. ಸರ್ವಭಕ್ತರ ಕಷ್ಟ ಪರಿಹಾರಗಳನ್ನು ನಿವಾರಿಸುವ ಕ್ಷೇತ್ರವಾಗಿ ಪ್ರಜ್ವಲಿಸುವ ಮೂಲಕ ಈ ನೆಲವು ಧಾರ್ಮಿಕ ಸಾಂಸ್ಕೃತಿಕವಾಗಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದರು.

ಬೆಳಿಗ್ಗೆ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ಥಳೀಯ ತುಳು ಕನ್ನಡಿಗರು, ಸದ್ಭಕ್ತ ಬಾಂಧವರು ಬಹುಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ವಂಶಸ್ಥ ಮೊಕ್ತೇಸರರಾದ ಶ್ರೀಮತಿ ಮತ್ತು ಶ್ರೀ ಕಲ್ಲಮುಂಡ್ಕೂರು ಹರಿಯಾಳಗುತ್ತು ಜಯರಾಜ ಶ್ರೀಧರ್ ಶೆಟ್ಟಿ ಬಾಲಕೃಷ್ಣ ರೈ, ಜಯಂತ್ ಸಿ ಶೆಟ್ಟಿ, ಮೋಕ್ತೆಸರರಾದ ಜಯಪಾಲಿ ಅಶೋಕ್ ಶೆಟ್ಟಿ, ಶಾಲಿನಿ ಪ್ರದೀಪ್ ಶೆಟ್ಟಿ, ಅಮೃತ ಜೆ ಶೆಟ್ಟಿ, ದೇವಾಸ್ಥನದ ಆಡಳಿತ ಮತ್ತು ಸಿಬ್ಬಂದಿ ವರ್ಗ, ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿಯ ಸದಸ್ಯರು, ಅರ್ಚಕ ವೃಂದ, ಬೆಳ್ಮಣ್ಣು ವೆಂಕಟರಮಣ ತಂತ್ರಿ ಸವಿತಾ ತಂತ್ರಿ ಕಟುಂಬಸ್ಥರು ಉಪಸ್ಥಿತರಿದ್ದರು.

ಸಂಜೆ 6 ಗಂಟೆಯಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ರಂಗ ಪೂಜೆ, ನಿತ್ಯ ಬಲಿ ಕಾರ್ಯಕ್ರಮಗಳು ಜರುಗಿದವು.