ಹಿರಿಯಡ್ಕ: ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ

ಹಿರಿಯಡ್ಕ: ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯ ವಾರ್ಷಿಕೋತ್ಸವನ್ನು (ಸೀನಿಯರ್ ವಿಭಾಗ) ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ರೆ. ಫಾ. ಲೆನ್ಸನ್ ಲಾರೆನ್ಸ್ ಲೋಬೊ ಉದ್ಘಾಟಿಸಿದರು. ಬಳಿಕ ಮಾತನಾಡಿ, ಗ್ರೀನ್ ಪಾರ್ಕ್ ಶಾಲೆಯು ಹಳ್ಳಿ ಪ್ರದೇಶದಲ್ಲಿದ್ದು ವಿದ್ಯಾಭ್ಯಾಸ ನಡೆಸಲು ಅತ್ಯಂತ ಪ್ರಶಸ್ತವಾಗಿದೆ. ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಶಾಲಾ ವಾರ್ಷಿಕೋತ್ಸವವು ಒಂದು ಉತ್ತಮ ವೇದಿಕೆಯಾಗಿರತ್ತದೆ. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಂಡು ಮೌಲ್ಯಯುತವಾದ ವಿದ್ಯಾಭ್ಯಾಸವನ್ನು ಕೊಟ್ಟು ಪ್ರಜ್ಞಾವಂತರನ್ನಾಗಿ ರೂಪಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಮಾತನಾಡಿ, ಜೀವನದಲ್ಲಿ ದೊಡ್ಡ ಕನಸುಗಳನ್ನಿಟ್ಟುಕೊಂಡು ವಿದ್ಯಾರ್ಜನೆ ಮಾಡಬೇಕು. ಶಾಲೆ ಎಂಬುದು ವಿದ್ಯಾರ್ಥಿಗಳ ವಿದ್ಯಾ ಕೇಂದ್ರವಾಗಿದ್ದು, ಸಂಸ್ಕೃತಿ ಸಂಬಂಧ, ಸಮಾಜದ ಬಗ್ಗೆ ಪೋಷಕರು ಸರಿಯಾದ ರೀತಿಯಲ್ಲಿ ತಿಳಿಹೇಳಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಈ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವೆಂದು ಹೇಳಿ ವಿದ್ಯಾರ್ಥಿಗಳಿಗೆ ತಾವು ಕಲಿತ ವಿದ್ಯಾ ಕೇಂದ್ರಕ್ಕೆ ಭೇಟಿ ನೀಡುವುದನ್ನು ರೂಡಿಸಿಕೊಳ್ಳಬೇಕೆಂದರು.

ಅತಿಥಿಗಳಾಗಿ ಡಿ.ಡಿ.ಪಿ.ಐ ಕೆ. ಗಣಪತಿ, ಶಾಲೆ ಹಳೆ ವಿದ್ಯಾರ್ಥಿ ಅಧಿತ್ ಎಸ್. ಶೆಟ್ಟಿ ಭಾಗವಹಿಸಿದ್ದರು.

ಶಾಲಾ ಪ್ರಾಂಶುಪಾಲೆ ಸಂಧ್ಯಾ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಉಪ ಪ್ರಾಂಶುಪಾಲೆ ಜಯಶ್ರೀ ತೆಂಡುಲ್ಕರ್, ಆಡಳಿತಾಧಿಕಾರಿ ಶೇಕರ್ ಗುಜ್ಜರ್‌ಬೆಟ್ಟು, ಸಂಯೋಜಕಿ ಉಷಾ ರಾವ್, ಗೀತಾ ಭಟ್, ಶಶಿಕಲಾ ರಾಜವರ್ಮ, ಶಾಲಾ ವ್ಯವಸ್ಥಾಪಕಿ ಅಮಿತಾ ಆರ್, ಹೆಗ್ಡೆ, ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.