ಕುಂದಾಪುರ: ಮಂಗಳವಾರದಂದು ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ವಾರ್ಷಿಕೋತ್ಸವ ಸಮಾರಂಭ ನೆರವೇರಿತು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ, ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇಲ್ಲಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಮಾತನಾಡಿ, ವಿದ್ಯಾರ್ಥಿಯು ತಂದೆ ತಾಯಿಯ ಕನಸನ್ನು ನನಸು ಮಾಡುವ ಶಿಕ್ಷಣ ಪಡೆದು ಜವಾಬ್ದಾರಿಯುತ ಸತ್ಪ್ರಜೆಯಾಗಿ ಭವ್ಯ ಭಾರತದ ನಿರ್ಮಾಣದಲ್ಲಿ ಸಹಕರಿಸಿ ಎಂದರು.
ಅತಿಥಿಯಾಗಿದ್ದ ನಟಿ ಶ್ರೀಮತಿ ಪ್ರತಿಮಾ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಸಂಸ್ಕೃತಿ, ಜವಾಬ್ದಾರಿ, ತಾಳ್ಮೆ, ಅನುಕಂಪ, ಪ್ರೀತಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನವನ್ನು ಉಜ್ವಲಗೊಳಿಸಿಕೊಳ್ಳಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಶ್ರೇಣಿ ಪಡೆದು ಸಂಸ್ಥೆಯ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ರಾಮಕೃಷ್ಣ ಕಾಮತ್ ಮಾತನಾಡಿ, ವಿದ್ಯಾರ್ಥಿಗಳು ಸಾಧನಾ ಪಥದಲ್ಲಿ ನಾಳಿನ ಬಗ್ಗೆ ಕಾಳಜಿ ಇಟ್ಟುಕೊಂಡು ಅನನ್ಯ ಶ್ರದ್ದೆ ಹಾಗೂ ಸತತ ಪ್ರಯತ್ನದಿಂದ ಶಿಕ್ಷಣ ಪಡೆದು ಸಮಾಜದಲ್ಲಿ ಕೀರ್ತಿ ತರುವಂತಹ ಸಾಧನೆ ನಿಮ್ಮದಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ ರಾಧಾಕೃಷ್ಣ ಶೆಣೈ , ಆಡಳಿತ ಮಂಡಳಿ ಟ್ರಸ್ಟಿ ಕೆ. ರತ್ನಾಕರ ಶೆಣೈ, ಕಾರ್ಪೊರೇಷನ್ ಬ್ಯಾಂಕ್ ನ ನಿವೃತ್ತ ಜನರಲ್ ಮ್ಯಾನೇಜರ್ ಕೆ. ಗಿರಿಧರ್ ಶೆಣೈ, ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ್ ಶ್ಯಾನುಭೋಗ್ , ರಾಸಾಯನ ಶಾಸ್ತ್ರ ಉಪನ್ಯಾಸಕ ರಮಾಕಾಂತ್ ರೇವಣ್ ಕರ್, ವೆಂಕಟರಮಣ ಸಮೂಹ ಸಂಸ್ಥೆಗಳ ಮುಖ್ಯ ಶಿಕ್ಷಕ ಕೃಷ್ಣ ಅಡಿಗ , ಶ್ರೀಮತಿ ರೇಷ್ಮಾ ಡಿಸೋಜಾ, ಪ್ರಮೀಳಾ ಡಿಸೋಜಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಗಿಣಿಯವರು ವಾರ್ಷಿಕ ವರದಿ ವಾಚಿಸಿದರು, ವಿದ್ಯಾರ್ಥಿಗಳಾದ ದಾಕ್ಷಾಯಿಣಿ ಹಾಗೂ ಅದಿತಿ ಅತಿಥಿಗಳನ್ನು ಪರಿಚಯಿಸಿದರು,ನೇಹಾ. ಜೆ. ರಾವ್ ಸ್ವಾಗತಿಸಿ, ಪ್ರಿನ್ಸಿ ಡಿ’ಸಿಲ್ವ ವಂದಿಸಿ, ಪ್ರಣಮ್ಯ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿತರಣಾ ಸಮಾರಂಭ
ವಾರ್ಷಿಕೋತ್ಸವದ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಿ ಮಾತನಾಡಿದ ನಿವೃತ್ತ ಕನ್ನಡ ಉಪನ್ಯಾಸಕ ಸಿದ್ದಾಪುರ ಡಾ. ಶ್ರೀಕಾಂತ್ ರಾವ್, ವಿದ್ಯಾರ್ಥಿಯ ಬದುಕಿನ ಯಾನದಲ್ಲಿ ಛಲ, ಗುರಿ, ಮೌಲ್ಯ, ಆಕಾಂಕ್ಷೆ, ಕೌಶಲ್ಯಗಳೊಂದಿಗೆ ಮುಂದೆ ಸಾಗಿದಲ್ಲಿ ಯಶಸ್ಸು ಖಚಿತ ಎಂದು ಹೇಳಿದರು.
ಕೊರೋನಾ ಮಹಾಮಾರಿಯಿಂದಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾದ ಕಾರಣ 2019- 20, 2020 -21ರ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಸಾಧನೆಗೈದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗದ ಕಾರಣ ಪ್ರಸಕ್ತ ವರ್ಷದ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭದಲ್ಲಿ 2021- 22 ರ ಸಾಲಿನ ವಿದ್ಯಾರ್ಥಿಗಳು ಸೇರಿ 393 ವಿದ್ಯಾರ್ಥಿಗಳಿಗೆ ಬೆಳ್ಳಿ ನಾಣ್ಯ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಕೆ ರಾಧಾಕೃಷ್ಣ ಶೆಣೈ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ರಾಗಿಣಿ, ಸಂಸ್ಥೆಯ ಆಡಳಿತಾಧಿಕಾರಿ ಪ್ರಭಾಕರ್ ಶ್ಯಾ ನುಭೋಗ್ , ವೆಂಕಟರಮಣ ಸಮೂಹ ಸಂಸ್ಥೆಗಳ ಮುಖ್ಯ ಶಿಕ್ಷಕ ಕೃಷ್ಣ ಅಡಿಗ, ಶ್ರೀಮತಿ ರೇಷ್ಮಾ ಡಿಸೋಜಾ, ಪ್ರಮೀಳಾ ಡಿಸೋಜಾ, ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಐಶ್ವರ್ಯ.ಡಿ.ರಾವ್ ಅತಿಥಿಯನ್ನು ಪರಿಚಯಿಸಿ, ವೀಕ್ಷಾ ಸ್ವಾಗತಿಸಿ, ಸನತ್ ಶೆಟ್ಟಿ ವಂದಿಸಿ, ನೇಹಾ ಎನ್. ರಾವ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.












