ಮಣಿಪಾಲ: ಮುಂಬರುವ ದಿನಗಳಲ್ಲಿ ವಿಜ್ಞಾನ ಮತ್ತು ಕಲೆಗಳ ಸಮ್ಮಿಲನದಿಂದ ಶಿಕ್ಷಣವು ಹೆಚ್ಚು ಹೆಚ್ಚು ಅಂತರಶಿಸ್ತಿಯವಾಗಲಿದೆ ಎಂದು ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಚ್.ವಿನೋದ್ ಭಟ್ ಹೇಳಿದರು.
ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ನ ವಾರ್ಷಿಕೋತ್ಸವ ‘ಸರ್ವೋದಯ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಕ್ತ ಕಲೆ ಮತ್ತು ಸಮಾಜಶಾಸ್ತ್ರೀಯ ವಿಷಯಗಳು ಮುಂದಿನ ದಿನಗಳಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲೂ ಹೆಚ್ಚಿನ ಮಹತ್ವವನ್ನು ಕಂಡುಕೊಳ್ಳಲಿದೆ. ಇಂತಹ ಸನ್ನಿವೇಶದಲ್ಲಿ ಮಾಹೆಯ ಜಿಸಿಪಿಎಎಸ್ ಒದಗಿಸುತ್ತಿರುವ ಕೋರ್ಸ್ಗಳು ಬಹಳಷ್ಟು ಮಹತ್ವವನ್ನು ಪಡೆಯುತ್ತವೆ ಮತ್ತು ವಿಶ್ವವಿದ್ಯಾನಿಲಯವು ಇಂತಹ ಕಲಿಕಾ ವಿಷಯಗಳಿಂದಲೇ ತನ್ನ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದರು.
ಸಂಸ್ಥೆಯಿಂದ ಹೊರಬರುವ ವಿದ್ಯಾರ್ಥಿಗಳು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಜನರು ಕಡಿಮೆ ಅರಿತಿರುವ ವ್ಯಕ್ತಿಗಳ ಬಗ್ಗೆ ಮತ್ತು ಗಾಂಧೀ ಚಳುವಳಿ ಬಗ್ಗೆ ಸಂಶೋಧನೆ ನಡೆಸಬೇಕು ಮತ್ತು ಅವರ ಬಗ್ಗೆ ಬರೆಯಬೇಕು. ಇದರಿಂದ ಸಣ್ಣ ಪುಟ್ಟ ಇತಿಹಾಸಗಳು ಬೆಳಕಿಗೆ ಬರಲಿವೆ ಎಂದು ಅಭಿಪ್ರಾಯಪಟ್ಟರು.
ಮಾಹೆಯಲ್ಲಿ ಕುಲಪತಿಯಾಗಿದ್ದ ಮತ್ತು ಅನೇಕ ಇತರ ಹುದ್ದೆಗಳನ್ನು ನಿರ್ವಹಿಸಿದ್ದ ಡಾ. ವಿನೋದ್ ಭಟ್ ಅವರ ಅಪಾರ ಕೊಡುಗೆಯನ್ನು ಸ್ಮರಿಸಿ ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಮಾತನಾಡಿ, ಪರಿಸರಶಾಸ್ತ್ರ, ಸೌಂದರ್ಯಶಾಸ್ತ್ರ ಮತ್ತು ಶಾಂತಿ ಜಿಸಿಪಿಎಎಸ್ ಕೋರ್ಸ್ಗಳ ತಾತ್ವಿಕ ನೆಲೆಗಳಾಗಿವೆ ಮತ್ತು ಮಾಧ್ಯಮಗಳು ಇವುಗಳನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿದೆ ಎಂದ ಅವರು, ಮಾಹೆಗೆ ಮತ್ತು ಜಿಸಿಪಿಎಎಸ್ ನ ಬೆಳವಣಿಗೆಗೆ ಡಾ ಭಟ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
ವಾರ್ಷಿಕೋತ್ಸವದಲ್ಲಿ , ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್), ಎಂಎ (ಇಕಾಸೊಫಿಕಲ್ ಎಸ್ಥೆಟಿಕ್ಸ್) ಮತ್ತು
ಎಂಎ (ಆರ್ಟ್ ಅಂಡ್ ಪೀಸ್ ಸ್ಟಡೀಸ್) ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಈ
ಸಂದರ್ಭದಲ್ಲಿ ಸಂಸ್ಥೆಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಮತ್ತು ಅನುಭವಗಳನ್ನು
ಹಂಚಿಕೊಂಡರು.