ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭ

ಉಡುಪಿ: ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭವು “ವಸುಧೈವ ಕುಟುಂಬಕಂ” ಕಲ್ಪನೆಯಲ್ಲಿ ಮೂಡಿ ಬಂತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಿಲಾಗ್ರಿಸ್‌ ಚರ್ಚ್‌ನ ಧರ್ಮ ಗುರುಗಳಾದ ವಲೇರಿಯನ್‌ ಮೆಂಡೊನ್ಸಾ ಮಾತನಾಡಿ, ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಜವಾಬ್ದಾರಿಯುತವಾದ ಒಂದು ಸಮುದಾಯವನ್ನು ನಿರ್ಮಾಣ ಮಾಡುವ ಕನಸು ಕಂಡು ಉತ್ತಮ ರೀತಿಯಿಂದ ಮುನ್ನಡೆಯುತ್ತಿದೆ. ಉಡುಪಿ ಪ್ರಾಂತ್ಯದಲ್ಲಿ ಕ್ರಿಯೇಟಿವ್‌ನ ಹೆಸರು ಇತ್ತೀಚೆಗೆ ಎಲ್ಲ ಕಡೆ ಕೇಳಲಾರಂಭಿಸಿದೆ. ಸಂಸ್ಥೆಗೆ ಉನ್ನತವಾದ ಯಶಸ್ಸು ಹಾಗೂ ಕೀರ್ತಿ ಲಭಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್‌ ವಿದ್ಯಾಸಂಸ್ಥೆಯ ಸಹ ಸಂಸ್ಥಾಪಕರಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳ ವಿಶೇಷವಾದ ಬೆಳವಣಿಗೆಗಳಿಗೆ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಲಿ ಎಂದು ಶುಭಹಾರೈಸಿದರು.

ಸಹ ಸಂಸ್ಥಾಪಕರಾದ ವಿದ್ವಾನ್‌ ಗಣಪತಿ ಭಟ್‌, ಅಮೃತ್‌ ರೈ, ಆದರ್ಶ ಎಂ.ಕೆ, ವಿಮಲ್‌ ರಾಜ್‌ ಜಿ, ಗಣಪತಿ ಕೆ.ಎಸ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.

ಸಹ ಸಂಸ್ಥಾಪಕ ಅಶ್ವತ್‌ ಎಸ್. ಎಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಸ್ಟಾನಿ ಲೋಬೋ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕರ ಜೋಯೆಲ್‌ ಸ್ವಾಗತಿಸಿ, ಸೋನಾಲ ನಿರೂಪಿಸಿ, ಉಪನ್ಯಾಸಕಿ ಶಿಲ್ಪಾ ಕ್ರಾಸ್ತಾ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.