ಮುಂಬಯಿ: ಮುಂಬಯಿ ಪಶ್ಚಿಮದ ಉಪನಗರದ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾದ ಕಾಂದಿವಿಲಿ ಕನ್ನಡ ಸಂಘ ದಹಾಣುಕರ್ ವಾಡಿ ಕಾಂದಿವಿಲಿ ಇದರ ಮಹಿಳಾ ವಿಭಾಗದ ಸದಸ್ಯರ ವತಿಯಿಂದ ಗಣೇಶ ಚತುರ್ಥಿಯ ಅಂಗವಾಗಿ ವಾರ್ಷಿಕ ಭಜನಾ ಕಾರ್ಯಕ್ರಮವು ಸೆ. 26ರಂದು ಕಾಂದಿವಿಲಿ ಪಶ್ಚಿಮದ ಪೊಯ್ಸರ್ ಜಿಮ್ಕಾನದ ಸಭಾಗೃಹದಲ್ಲಿ ಭಜನೆ ಭಕ್ತಿ ಗಾಯನ ಭಜನಾ ಕುಣಿತ ಇನ್ನಿತರ ಧಾರ್ಮಿಕ ವೈವಿಧ್ಯ ಕಾರ್ಯಕ್ರಮದೊಂದಿಗೆ ಜರಗಿತು.
ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷ ಪ್ರೇಮ್ ನಾಥ್ ಪಿ ಕೋಟ್ಯಾನ್ ಪದಾಧಿಕಾರಿಗಳು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಭಿತಾ ಜಿ ಪೂಜಾರಿ ಉಪಾಧ್ಯಕ್ಷೆ ಪಾರಿಜಾ ಎಸ್ ಕರ್ಕೇರ, ಮಾಜಿ ಕಾರ್ಯಾಧ್ಯಕ್ಷೆ ವಿನೋದಾ ಡಿ ಶೆಟ್ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಧಾರ್ಮಿಕ ಕಾರ್ಯಕ್ರಮ ಜರುಗಿದ ಬಳಿಕ ಪರಿಸರದ ಪ್ರತಿಭಾವಂತ ಆರ್ಥಿಕವಾಗಿ ಅಶಕ್ತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಧನಸಹಾಯ ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪೊಲ್ಯ ಜಯಪಾಲ್ ಶೆಟ್ಟಿ, ಮಕ್ಕಳಲ್ಲಿ ಪ್ರತಿಭಾ ಕಾರಂಜಿಯನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಾಂದಿವಲಿ ಕನ್ನಡ ಸಂಘ ಪ್ರತಿ ವರ್ಷ ಪರಿಸರದ ಆರ್ಥಿಕ ಹಿಂದುಳಿದ ಪ್ರತಿಭಾವಂತ ಆಯ್ದ ತುಳು ಕನ್ನಡಿಗರ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಧನ ಸಹಾಯ ನೀಡುತ್ತಾ ಬಂದಿದೆ. ಬದಲಾದ ಬದುಕಿನಲ್ಲಿ ಆತ್ಮೀಯತೆಯನ್ನು ವೃದ್ಧಿಸಿ ಸಮಾಜ ಕಟ್ಟುವ ಶಕ್ತಿ ಸಂಘಟನೆಯಿಂದ ಮಾತ್ರ ಸಾಧ್ಯ. ಆ ಮೂಲಕ ಸಂಘವು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಾನವೀಯ ಸಂಬಂಧಗಳನ್ನು ಸೌಹಾರ್ದ ಮತ್ತು ಆತ್ಮೀಯವಾಗಿ ಬೆಳೆಸುವ ಮೂಲಕ ಸಾಂಘಿಕವಾಗಿ ಸಂಘಟಿತರಾಗಿ ಸಂಘದ ಬೆಳವಣಿಗೆಯ ಅಡಿಪಾಯಕ್ಕೆ ತಳಹದಿಯಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ ಹೆಜ್ಮಾಡಿ ಸಂಘದ ಕಾರ್ಯಚಟುವಟಿಕೆಯ ಜೊತೆಗೆ ಮಹಿಳಾ ಸದಸ್ಯರು ಆಧ್ಯಾತ್ಮಿಕವಾಗಿ ತಮ್ಮನ್ನು ತೊಡಗಿಸಿ ಕೊಳ್ಳುವ ಮೂಲಕ ವಾರ್ಷಿಕ ಗಣೇಶ ಪೂಜೆಗೆ ಸದಾ ಮಹತ್ವ ನೀಡುತ್ತಾ ಬಂದಿದ್ದಾರೆ. ಆ ಮೂಲಕ ಎಲ್ಲಾ ಮಹಿಳೆಯರು ಸಾಮಾಜಿಕ ವ್ಯಕ್ತಿತ್ವ ವಿಕಸನ ಮೈಗೂಡಿಸಿಕೊಳ್ಳಲು ಒಂದು ಸಶಕ್ತ ಕಾರ್ಯಕ್ರಮ ಇದಾಗಿದೆ. ಜೊತೆಗೆ ಮಕ್ಕಳಲ್ಲಿ ವಿದ್ಯೆ ಪ್ರತಿಭೆಯನ್ನು ಇಮ್ಮಡಿಗೊಳಿಸುವ ಉದ್ದೇಶದಿಂದ ಸಂಘವು ಪ್ರತಿ ವರ್ಷ ಆರ್ಥಿಕ ಅಸಹಾಯಕ ಪರಿಸರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಧನ ಸಹಾಯ ನೀಡುತ್ತಿರುವ ಮಾದರಿ ಸಂಸ್ಥೆಯಾಗಿದೆ ಎಂದು ಹೇಳಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳಾ ಸದಸ್ಯರನ್ನು ಅಭಿನಂದಿಸಿದರು.
ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ಮತ್ತು ಕುಣಿತ ಭಜನೆ ಜರುಗಿತು, ಕಾರ್ಯಕ್ರಮದ ಕೊನೆಯಲ್ಲಿ ಸದಸ್ಯರಿಂದ ಸಮೂಹ ಮಂಗಳಾರತಿ ಜರುಗಿದ ನಂತರ ಮಹಿಳಾ ಸದಸ್ಯರು ನೆರೆದ ಸದಸ್ಯರಿಗೆ ಪ್ರಸಾದ ವಿತರಿಸಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಬಿತಾ ಜಿ ಪೂಜಾರಿ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಅಧಿಕ ಸಂಖ್ಯೆಯಲ್ಲಿ ಭಾಗಹವಹಿಸಿ ಕಾರ್ಯಕ್ರಮದ ಯಶಸ್ವಗೆ ಸಹಕರಿಸಿದ ಎಲ್ಲಾ ಮಹಿಳಾ ಸದಸ್ಯರನ್ನು ಅಭಿನಂಧಿಸಿದರು.
ಸಂಘದ ಗೌರವಾಧ್ಯಕ್ಷ ಪಳ್ಳಿ ಕಾವೇರಿ ಬೆಟ್ಟು ಜಯಕರ ಎಸ್ ಶೆಟ್ಟಿ ಕೋಶಾಧಿಕಾರಿ ಜಗನಾಥ್ ಡಿ ಕುಕ್ಯಾನ್ ಮಾಜಿ ಕೋಶಾಧಿಕಾರಿ ಸುಂದರ ಶೆಟ್ಟಿ, ಸದಸ್ಯರಾದ ಮಂಜಯ್ಯ ಅಮೀನ್ ಪ್ರ ಶಾಂತ್ ಪೂಜಾರಿ, ಚಾರ್ಕೋಪ್ ಕನ್ನಡಿಗರ ಬಳಗದ ಗೌ. ಕಾರ್ಯದರ್ಶಿ ರಘುನಾಥ್ ಎನ್ ಶೆಟ್ಟಿ ಸುಮಾ ಎಸ್ ಕುಂದರ್,,ಯಮುನಾ ಬಿ ಸಾಲ್ಯಾನ್ ಜಯಂತಿ ಯು ಸಾಲ್ಯಾನ್, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶೀಲಾ ಅಮೀನ್ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಮಹಿಳಾ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ, ವರದಿ: ರಮೇಶ್ ಉದ್ಯಾವರ












