ಉಡುಪಿ: “ನಿಕ್ಲೆಗ್ ಎನ್ನ ನಮಸ್ಕಾರ. ಎಂಚ ಉಲ್ಲರ್?” ಎಂದು ತುಳುವಿನಲ್ಲಿ ಮಾತನ್ನು ಶುರು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ, ಮತ್ತು ರಾಜ್ಯದ ಜನತೆಯ ಶುಭಾಶಯ ಕೋರಿದರು. ಬಂಟರ ಅಭಿವೃದ್ದಿ ನಿಗಮ ಮಾಡುವ ಭರವಸೆಯನ್ನು ಕರಾವಳಿ ಕರ್ನಾಟಕದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದು, ಮುಂದಿನ ಬಜೆಟ್ ನಲ್ಲಿ ಅದನ್ನು ಅಧಿಕೃತವಾಗಿ ಘೋಷಣೆ ಮಾಡುತ್ತೇನೆ ಎಂದರು.
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ಬಂಟರ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸಂತೋಷದಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಗವಹಿಸಿದ್ದೇನೆ. ಬಂಟರು ಪ್ರಾಚೀನ ಕಾಲದಿಂದಲೂ ಕರಾವಳಿ ಪ್ರದೇಶದಲ್ಲಿ ತಮ್ಮ ಜೀವನ ನಡೆಸಿದವರು. ಇದನ್ನು ಇತಿಹಾಸದಲ್ಲಿ ಕೂಡಾ ನೋಡಲು ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅನೇಕ ಪ್ರದೇಶಗಳಿಗೆ ನಾನಾ ಕಾರಣ ನಿಮಿತ್ತ ಬಂಟರು ವಲಸೆ ಹೋಗಿದ್ದಾರೆ. ವಿಶ್ವದ ಅನೇಕ ಭಾಗಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದ.ಕ ಜಿಲ್ಲೆಯ ಬಂಟರು ಸಾಹಸ ಪ್ರವೃತ್ತಿ ಉಳ್ಳವರು. ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ಸಮಾಜ. ರಾಜ್ಯಕ್ಕೆ ಅವರ ಕೊಡುಗೆ ಅಪಾರ. ಬಂಟ ಜನಾಂಗದವರು ಶಿಕ್ಷಣ, ಕ್ರೀಡೆ, ಸಿನಿಮಾ, ಉದ್ಯಮ, ಹೋಟೇಲ್ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುವ ಕೆಲಸ ಮಾಡಿದ್ದಾರೆ. ಎಲ್ಲೇ ಇದ್ದರೂ ಕರಾವಳಿ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆತಿಲ್ಲ ಎಂದರು.
ಇಬ್ಬರು ಮಂಗಳೂರಿನವರು ಸಿಕ್ಕರೆ ತುಳು ಭಾಷೆಯಲ್ಲೇ ಮಾತನಾಡುವವರು. ತುಳುವ ಬಂಟರು ತಮ್ಮ ಭಾಷೆಯನ್ನು ಪ್ರೀತಿಸಿ ಗೌರವಿಸುವವರು. ಮಾತೃ ಭಾಷೆಯನ್ನು ಗೌರವಿಸಬೇಕು ಅದು ಮಾತೃ ಭಾಷೆಗೆ ನೀಡುವ ಗೌರವ. ಕನ್ನಡ ನಾಡಿನಲ್ಲಿ ಹುಟ್ಟಿದ ಬಂಟರು ಕನ್ನಡ ಸಂಸ್ಕೃತಿ, ಪರಂಪರೆ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಜಾತಿ ಮತದ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನತೆಯಿಂದ ಕಾಣುವ ಜಾತ್ಯಾತೀತ ವ್ಯಕ್ತಿತ್ವ ಹೊಂದಿರುವ ಸಮಾಜ ಬಂಟರದ್ದು. ಬಂಟರ ಸಮಾಜದ ನಡವಳಿಕೆ ಅನುಕರಣೀಯ. ಮುಂದಿನ ದಿನಗಳಲ್ಲಿ ಬಂಟ ಸಮುದಾಯ ಇನ್ನಷ್ಟು ಅಭಿವೃದ್ದಿ ಹೊಂದಲಿ ಎಂದು ಶುಭಹಾರೈಸಿದರು.
ಉಡುಪಿ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತಾನಾಡಿ, ಬಂಟ ಸಮುದಾಯದವರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪನ್ನು ಬೀರಿದವರು. ಕಲೆ, ಕ್ರೀಡೆ, ಸಾಹಿತ್ಯ, ಸ್ವಾತಂತ್ರ್ಯ ಹೋರಾಟ ಎಲ್ಲ ಕ್ಷೇತ್ರದಲ್ಲಿಯೂ ಸಾಹಸ ಮೆರೆದವರು. ಕರ್ನಾಟಕ ಮಾತ್ರವಲ್ಲ ದೇಶ ಮತ್ತು ವಿಶ್ವಕ್ಕೆ ಕೊಡುಗೆ ನೀಡಿದವರು. ವಿಶ್ವದ ಬಂಟರೆಲ್ಲರನ್ನೂ ಒಗ್ಗೂಡಿಸುವ ಕೆಲಸ ಉಡುಪಿ ಮಂಗಳೂರು ಬಂಟ ಸಮಾಜದಿಂದ ಆಗಿರುವುದು ಶ್ಲಾಘನೀಯ. ಬೆಳಗಾವಿಯ ಹೋಟೆಲ್ ಉದ್ಯಮಗಳಲ್ಲಿ ಬಂಟರು ತೊಡಗಿಸಿಕೊಂಡಿದ್ದಾರೆ. ಬಂಟರ ಆತಿಥ್ಯ ನೋಡಿದಾಗ ಭಗವಂತನ ಕೃಪಾಶೀರ್ವಾದ ಸಮುದಾಯದ ಮೇಲಿದೆ ಎನಿಸುತ್ತದೆ. ಹೋಟೆಲ್, ವ್ಯಾಪಾರ ಉದ್ದಿಮೆಗಳಲ್ಲಿ ಹೃದಯ ಶ್ರೀಮಂತಿಕೆ ಮೆರೆಯುವ ಸಮಾಜ, ಇತರ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ದೊಡ್ಡ ಮನಸ್ಸು ಬಂಟರದ್ದು ಎಂದರು.
ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್ ಮಾತನಾಡಿ, ಬಂಟರ ಪ್ರೀತಿ ವಿಶ್ವಾಸ ನನ್ನನ್ನು ಇಲ್ಲಿ ಕರೆತಂದಿದೆ. ಎಲ್ಲಾ ವರ್ಗದವರನ್ನೂ ಪ್ರೀತಿ ವಿಶ್ವಾಸದಿಂದ ಸಮಾನತೆಯಿಂದ ಕಾಣುವ ಸಮಾಜ ಬಂಟರದ್ದು. ಸಮಾಜದಲ್ಲಿ ನೇತೃತ್ವ ಹೊಂದಿರುವ ಪರಂಪರೆ ಇರುವ ಸಮಾಜ ಇದನ್ನು ಯುವ ಜನಾಂಗ ಮುಂದೆ ಕೊಂಡು ಹೋಗಬೇಕು. ಬಂಟರಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ. ಬಲಿಷ್ಟ ಸಮಾಜದಿಂದ ಬಲಿಷ್ಟ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದ್ದು, ಇದರಲ್ಲಿ ಬಂಟ ಸಮಾಜ ಮುಂದೆ ನಿಲ್ಲುತ್ತದೆ ಎನ್ನುವ ವಿಶ್ವಾಸವಿದೆ. ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಹಿಂದುಳಿದ ವರ್ಗಗಳ ಆಯೋಹದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಶಾಸಕ ಯಶ್ ಪಾಲ್ ಸುವರ್ಣ, ಅರೋಕ್ ಕುಮಾರ್, ದಾನಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಪ್ರಕಾಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬೆಳಪು, ರಮಾನಾಥ್ ರೈ, ಮಿಥುನ್ ರೈ, ಮುನಿಯಾಲ್ ಉದಯ್ ಕುಮಾರ್ ಶೆಟ್ಟಿ, ಜಯಕರ್ ಶೆಟ್ಟಿ ಇಂದ್ರಾಳಿ, ಬಂಟ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು.