ದೈವಾರಾಧಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿ: ಧೈವಾರಾಧಕರ ಸಹಕಾರಿ ಒಕ್ಕೂಟದ ಆಗ್ರಹ

ಉಡುಪಿ: ತುಳುನಾಡ ಧೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಇದರ ವತಿಯಿಂದ ಇಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಕೊರೊನಾ ಸಂದರ್ಭದಲ್ಲಿ ದೈವಾರಾಧಕರಿಗೆ ಆಗುತ್ತಿರುವ ಆರ್ಥಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ದೈವ ಚಾಕ್ರಿ ವರ್ಗದವರಿಗೆ ಸರ್ಕಾರದಿಂದ ತುರ್ತಾಗಿ ಆರ್ಥಿಕ ಪ್ಯಾಕೇಜ್ ಘೋಷಿಸಲು ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮನವಿ ಮಾಡಿದರು.

ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ದೈವ ಚಾಕ್ರಿ ವರ್ಗದವರಿಗೆ ಈವರೆಗೆ ಸರ್ಕಾರದಿಂದ ಯಾವುದೇ ವಿಶೇಷ ಪ್ಯಾಕೇಜ್ ಬಿಡುಗಡೆಯಾಗಿಲ್ಲ. ಅಲ್ಲದೆ 150 ಜನ ಮೀರಿದಂತೆ ನಡೆಸುವ ದೈವಾರಾಧನೆ ಕಾರ್ಯಕ್ರಮಗಳಿಗೂ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಜನಪ್ರತಿನಿಧಿಗಳು ಹಾಗೂ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಕೊಟ್ಟರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ಆಳಲು ತೋಡಿಕೊಂಡರು.

ವಿರೋಧ ಪಕ್ಷದ ಮೂಲಕ ನಮ್ಮ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಒಕ್ಕೂಟ ನಿಮಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಮನವಿ ಸ್ವೀಕರಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದೈವಾರಾಧಕರ ಸಮಸ್ಯೆಗಳ ಬಗ್ಗೆ ತಕ್ಷಣವೇ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡುತ್ತೇನೆ. ನಿಮ್ಮ ಬೆಂಬಲಕ್ಕೆ ನಾನಿದ್ದೇನೆಂದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ, ಉಪಾಧ್ಯಕ್ಷರಾದ ರವಿ ಶೆಟ್ಟಿ, ಯೋಗೀಶ್ ಪೂಜಾರಿ, ಕಾಪು ಘಟಕದ ಅಧ್ಯಕ್ಷ ಯಶೋಧರ್ ಶೆಟ್ಟಿ ಹಾಗೂ ದಯೆಶಾ ಕೋಟ್ಯಾನ್, ಸುನಿಲ್ ಕುಮಾರ್, ಸಂತೋಷ್ ದೇವಾಡಿಗ, ನಿತ್ಯಾನಂದ, ಸೂರ್ಯಕಾಂತಾ ದೇವಾಡಿಗ, ರಕ್ಷಿತ್ ಇದ್ದರು.