ಚೆನ್ನೈ: ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಅನುಮತಿ ಪಡೆಯದೆ ರಾಜ್ಯ ಸಚಿವಾಲಯದತ್ತ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಬೇಕೆಂದು ರಾಜು ಬಿಜೆಪಿ ಒತ್ತಾಯಿಸುತ್ತಿದೆ.
ಅಣ್ಣಾಮಲೈ ಮತ್ತು 5,000 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ತಮಿಳುನಾಡು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 31 ರಂದು ಅಣ್ಣಾಮಲೈ ಅವರೊಂದಿಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಾ ರಾಜ್ಯದ ಸಚಿವಾಲಯದ ಕಡೆಗೆ ಮೆರವಣಿಗೆ ನಡೆಸುತ್ತಿದ್ದಾಗ ಪೊಲೀಸರು ಅವರನ್ನು ತಡೆದು ಪ್ರಕರಣ ದಾಖಲಿಸಿದ್ದಾರೆ.
ಡಿಎಂಕೆ ಆಡಳಿತದ ವಿರುದ್ಧ ಬಿಜೆಪಿಯ ಪ್ರತಿಭಟನೆಯನ್ನು ಸಮರ್ಥಿಸಿದ ಅಣ್ಣಾಮಲೈ, ಸ್ಟಾಲಿನ್ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಭರವಸೆಯನ್ನು ನೀಡಿತ್ತು. ಕೇಂದ್ರವು ಈಗಾಗಲೇ ಇಂಧನ ಬೆಲೆಯನ್ನು ಕಡಿಮೆ ಮಾಡಿದೆ ಮತ್ತು ಈಗ ರಾಜ್ಯ ಸರ್ಕಾರವು ತನ್ನ ಭರವಸೆಯನ್ನು ಈಡೇರಿಸಬೇಕು ಎಂದಿದ್ದಾರೆ.












