ರಾಜ್ಯ: ಖಡಕ್ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಕೊನೆಗೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ತಮ್ಮ ಹುದ್ದೆ ರಾಜೀನಾಮೆ ಕೊಟ್ಟು ಅವರು ರಾಜಕೀಯಕ್ಕೆ ಸೇರಲಿದ್ದಾರೆ ಎನ್ನುವ ಗುಸುಗುಸು ಮಾತುಗಳನ್ನು ಕಳೆದೆರಡು ದಿನಗಳಿಂದ ಮತ್ತೆ ಮತ್ತೆ ಕೇಳಿ ಬರುತ್ತಲೇ ಇತ್ತು ಇದೀಗ ಆ ಮಾತಿಗೆ ಪುಷ್ಟಿ ದೊರೆತಿದ್ದು ಅಣ್ಣಾಮಲೈ ಅವರು ಡಿಜಿ ಹಾಗೂ ಐಜಿಪಿ ನೀಲಮಣಿ ರಾಜುಗೆ ಇಂದೇ ರಾಜೀನಾಮೆ ಪತ್ರ ರವಾನಿಸಿದ್ದು, ಆ ಪತ್ರ ರಾಜ್ಯ ಗೃಹ ಕಾರ್ಯದರ್ಶಿಗೆ ರವಾನೆಯಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ.
“ಇಷ್ಟು ದಿನ ದರೋಡೆ, ಕೊಲೆ, ಸುಲಿಗೆಗಳನ್ನೆಲ್ಲ ನೋಡಿ ನೋಡಿ ಸಾಕಾಗಿದ್ದು , ಕುಟುಂಬಕ್ಕೆ ಸಮಯ ಕೊಡಲೇ ಆಗಿಲ್ಲ. ಅಲ್ಲದೇ ನನ್ನ ಕನಸುಗಳು ಇನ್ನೂ ಬಾಕಿ ಇದೆ. ಅದನ್ನು ನನಸು ಮಾಡಲು ನಾನು ಈ ಹುದ್ದೆಯಿಂದ ಹೋಗುವುದು ಅನಿವಾರ್ಯ ಎಂದು ಅಣ್ಣಾಮಲೈ ಹೇಳಿದ್ದಾರೆ ಎನ್ನಲಾಗಿದೆ. ಆದರೆ ರಾಜಕೀಯ ಸೇರುವ ಬಗ್ಗೆ ಖಾತ್ರಿ ಇಲ್ಲ ಎನ್ನುವ ಮಾಹಿತಿ ಸಿಕ್ಕಿದ್ದು, ಚಾರಣ ಹಾಗೂ ತಮ್ಮ ಆಸಕ್ತಿಯನ್ನು ತೊಡಗಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಇದೆ.
ಭ್ರಷ್ಟರನ್ನು ಬೆನ್ನಟ್ಟಲೆಂದೇ ಪೊಲೀಸ್ ಅಧಿಕಾರಿಯಾದ ಹಳ್ಳಿ ಹೈದ:
ಅಣ್ಣಾ ಮಲೈ ಹುಟ್ಟಿದ್ದು ತಮಿಳುನಾಡಿನ ಪುಟ್ಟ ಹಳ್ಳಿಯೊಂದರಲ್ಲಿ. ತಂದೆ ಕುಪ್ಪುಸ್ವಾಮಿ. ಕೃಷಿ ಮಾಡುತ್ತಲೇ ತುತ್ತಿನ ಚೀಲ ತುಂಬಿಕೊಳ್ಳೋ ಹಂಬಲದಿಂದಲೇ ಮಗನನ್ನು ಬೆಳೆಸಿದ. ಒಟ್ಟಾರೆ ಇವರ ಹಳ್ಳಿಜೀವನವೆಂದರೆ ಕಷ್ಟ, ಸಂಕಷ್ಟಗಳ ದಿಬ್ಬಣ. ತಂದೆಯ ಮೇಲೆ ಯಾರ್ಯಾರೋ ಹಾಕಿದ ಪೊಳ್ಳು ಆಪಾದನೆಗಳಿಗೆ, ಆತನಿಗೆ ನೀಡುತ್ತಿದ್ದ ಕೀಟಲೆಗಳನ್ನೆಲ್ಲಾ ನೋಡುತ್ತಿದ್ದ ಅಣ್ಣಾ ಮಲೈ ಅನ್ನೋ ಪೋರ ಆಕ್ರೋಶದ ಹುಲಿಯಾಗಿದ್ದು ಆಗಲೇ, ಒಟ್ಟಾರೆ ಪೋಲಿಸ್ ಇಲಾಖೆಯ ಕೆಲವೊಂದು ದಾರುಣ ಕಥೆಗಳೆಲ್ಲಾ, ಯಾರಿಗೂ ಗೊತ್ತಾಗದಂತೆ ಗಟ್ಟಿಯಾಗುತ್ತಿದ್ದ ಅಲ್ಲಿನ ಫಿಕ್ಸಿಂಗುಗಳನ್ನೆಲ್ಲಾ ಆಗಲೇ ಹುಡುಗನಿಗೆ ಕಾಡಿಯೇ ಕಾಡಿತ್ತು. ಮುಂದೆ ಮೆಕಾನಿಕಲ್ ಎಂಜಿನಿಯರಿಂಗ್ ಓದಿದ, ಎಂ.ಬಿ.ಎ ಮಾಡಿದ, ಸಿಂಗಾಪುರದಲ್ಲಿ ಒಳ್ಳೆ ಹುದ್ದೆ ಗಿಟ್ಟಿಸಿ ನೌಕರಿಯನ್ನೂ ಮಾಡಿದ, ಮುಂದೆ ತಾನು ಕನಸು ಕಂಡ ಐ.ಪಿ.ಎಸ್ ಓದಿ ಇಲಾಖೆ ಸೇರಿದ. ಆ ಹುರುಪಿನ ಹುಡುಗನೇ ನೀವೀಗ ನೋಡುತ್ತಿರೋ ಎ.ಎಸ್.ಪಿ ಅಣ್ಣಾಮಲೈ. ಕೆಲವೊಂದು ದುರ್ಘಟನೆಗಳೂ ಮುಂದೆ ಒಳ್ಳೆದಾಗುತ್ತೆ ಅನ್ನೋ ಶುಭ ಸೂಚಕ. ಅದನ್ನೇ ಪಾಸಿಟಿವ್ ಆಗಿ ತಗೊಂಡಾಗ ಅದರ ಕಿಕ್ಕೇ ಬೇರೆ. ಇವರ ಜೀವನದಲ್ಲೂ ಅಂತಹ ದಾರುಣ ಕಥೆಗಳು ಬಿಚ್ಚಿಕೊಂಡಿದ್ದರಿಂದಲೇ, ಆಕ್ರೋಶಗಳು ಇಡಿ ಹಿಡಿಯಾಗಿ ಒಟ್ಟುಗೂಡಿದ್ದರಿಂದಲೇ ಅದು ಮುಂದೆ ಸಾಧನೆಯಾಗಿ ಹೊರಹೊಮ್ಮಿತು. ನೆಗೆಟಿವ್ ಸಂಗತಿಗಳೂ ಇಲ್ಲಿ ಪೊಸಿಟಿವ್ ರೂಪ ಪಡೆದುಕೊಳ್ಳುತ್ತಲೇ ಹೋಯಿತು. ಸಮಾಜದ ಜೊತೆ ಬೆರೆತು ಬಾಳಲು ಖಾಕಿಯ ಹದ್ದಿನ ಕಣ್ಣು ದನಿಯಾಯಿತು. ಪೋಲಿಸ್ ಕ್ಯಾಪ್ನಲ್ಲಿ ಮತ್ತೊಂದಿಷ್ಟು ಕನಸುಗಳು ಹುಟ್ಟಿಕೊಳ್ಳುತ್ತಲೇ ಹೋಯಿತು. ಇದೀಗ ಅಣ್ಣಾಮಲೈ ರಾಜೀನಾಮೆ ಕೊಟ್ಟಿರೋದು ಹಲವರಲ್ಲಿ ಬೇಸರ ತಂದಿದೆ.












