ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಅನಿರುದ್ದ ಜತ್ಕರ್; ಬಾಳೆ ಬಂಗಾರ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿಯ ಗರಿ

ನವದೆಹಲಿ: 69ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನುಅಕ್ಟೋಬರ್​ 17 ರಂದು ದೆಹಲಿಯಲ್ಲಿ ಪ್ರದಾನ ಮಾಡಲಾಗಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾರತಿ ವಿಷ್ಣುವರ್ಧನ್​ ಅವರ ಸಾಧನೆ ಹಾಗೂ ಜೀವನದ ಬಗ್ಗೆ ಅನಿರುದ್ದ ಜತ್ಕರ್ ನಿರ್ದೇಶಿಸಿರುವ ‘ಬಾಳೆ ಬಂಗಾರ’ ಸಾಕ್ಷ್ಯಚಿತ್ರಕ್ಕೆ ನಾನ್​-ಫೀಚರ್​ ಫಿಲ್ಮ್​ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ​ ದೊರೆತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನಿರುದ್ಧ್​ ಜತ್ಕರ್​ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅನಿರುದ್ದ್, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ನನ್ನ ‘ರಾಷ್ಟ್ರೀಯ ಪ್ರಶಸ್ತಿ’ ಸ್ವೀಕರಿಸಿದ ಕ್ಷಣ. 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಾನ್ ಫೀಚರ್‌ (ಸ್ಪೆಷಲ್ ಮೆನ್ಷನ್) ವಿಭಾಗದಲ್ಲಿ ‘ಪದ್ಮಶ್ರೀ’ ಪುರಸ್ಕೃತೆ ಡಾ॥ ಭಾರತಿ ವಿಷ್ಣುವರ್ಧನ್ ಅವರ ಜೀವನದ ಕುರಿತ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದ ನಿರ್ದೇಶನಕ್ಕಾಗಿ ನನಗೆ ಬಂದ ಈ ‘ರಾಷ್ಟ್ರೀಯ ಪ್ರಶಸ್ತಿ’ ಗೆ ನಾನು ಭಾರತಿ ಅಮ್ಮನ ಸಾಧನೆ ಹಾಗೂ ನನಗೆ ಈ ಸಾಕ್ಯಚಿತ್ರ ಮಾಡಲು ಕೊಟ್ಟ ಒಪ್ಪಿಗೆ, ನನ್ನ ಅರ್ಧಾಂಗಿ ಕೀರ್ತಿ ಇವರ ನಿರ್ಮಾಣ ಸಂಸ್ಥೆ ಕೀರ್ತಿ ಇನೊವೇಶನ್ಸ್ ನ ಪ್ರತಿಯೊಬ್ಬರ ಸಹಕಾರ, ನನ್ನ ತಾಯಿ ಮತ್ತು ನನ್ನ ಕುಟುಂಬದವರ ಬೆಂಬಲ ಹಾಗೂ ನನ್ನ ಬೃಹತ್‌ ಕುಟುಂಬದವರಾದ ತಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ, ಪ್ರಾರ್ಥನೆ ಮತ್ತು ಆಶೀರ್ವಾದವೇ ಕಾರಣ…ಎಲ್ಲರಿಗೂ ಕೋಟಿ ಕೋಟಿ ಧನ್ಯವಾದಗಳು, ನಮನಗಳು ಎಂದಿದ್ದಾರೆ.