ಕಾಪು: ಆರ್ಟ್ ಆಫ್ ಲಿವಿಂಗ್ (Art Of Living) ಸಂಸ್ಥಾಪಕ ರವಿಶಂಕರ್ ಗುರೂಜಿ (Ravishanakar Guruji) ಮಂಗಳವಾರದಂದು ಇಲ್ಲಿನ ಸಮುದ್ರ ತೀರದಲ್ಲಿ ‘ಆನಂದ ಲಹರಿ’ ಮಹಾಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು.
ರವಿಶಂಕರ್ ಗುರೂಜಿ ಅವರು ವೇದಿಕೆ ಮೇಲೆರುತ್ತಿದ್ದಂತೆಯೇ ನೆರೆದವರು ಜಯ ಘೋಷ ಮೊಳಗಿಸಿದರು. ಪಾಲ್ಗೊಂಡ ಸಹಸ್ರಾರು ಜನರಿಗೆ ಬೆಲ್ಲದ ಶೀರ, ಅವಲಕ್ಕಿ- ಕಡಲೆಯುಕ್ತ ವಿಶೇಷ ಪ್ರಸಾದ ವಿತರಿಸಲಾಯಿತು. ಜನಸಾಗರದ ನಡುವೆ ವೇದಿಕೆಯಲ್ಲಿ ಸಂಚರಿಸಿದ ರವಿಶಂಕರ್ ಗುರೂಜಿ ಅವರು ಜನರ ಭಕ್ತಿ ಭಾವದ ಗೌರವ ಪಡೆದುಕೊಂಡು ಹಾರೈಸಿ, ಪುಷ್ಪದಳ ಪ್ರಸಾದವಾಗಿ ನೀಡಿದಾಗ ಭಕ್ತರು ಪುಳಕಗೊಂಡರು.
ಸತ್ಸಂಗ ಆರಂಭಕ್ಕೆ ಮೊದಲು ಕಾರ್ಯಕ್ರಮ ಸಂಯೋಜಕರಾದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಹರೀಶ್ ಶೆಟ್ಟಿ ಗುರ್ಮೆ ಮತ್ತು ಸತೀಶ್ ಶೆಟ್ಟಿ ಗುರ್ಮೆ ಅವರು ಶಂಕರಪುರ ಮಲ್ಲಿಗೆ ಹಾರಹಾಕಿ, ಮೈಸೂರು ಪೇಟ ತೊಡಿಸಿ ಶಾಲು ಫಲಪುಷ್ಪಗಳ ಸಹಿತ ಸ್ಮರಣಿಕೆಯೊಂದಿಗೆ ಗುರುಗಳನ್ನು ಗೌರವಿಸಿದರು.
ರವಿಶಂಕರ್ ಗುರೂಜಿ ಮಾತನಾಡಿ, ವಸುದೈವ ಕುಟುಂಬಕಂ ಪರಂಪರೆಯನ್ನು ಪ್ರಪಂಚಕ್ಕೆ ಕೊಟ್ಟ ದೇಶ ಭಾರತ. ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ಭಾರತವು ಸನಾತನ ಧರ್ಮ, ಜ್ಞಾನಾಧಾರಿತ ತಂತ್ರಜ್ಞಾನ, ಒಡವೆ ಆಭರಣ-ವಸ್ತ್ರ, ಪ್ರವಾಸೋದ್ಯಮ, ಆಯುರ್ವೇದ, ವೈವಿಧ್ಯಮಯ ಆಹಾರ ಪದ್ಧತಿ, ಕಲೆ-ಸಂಸ್ಕೃತಿ-ಸಿದ್ಧಾಂತಗಳೊಂದಿಗೆ ಪ್ರಪಂಚದಲ್ಲೇ ಶ್ರೇಷ್ಠತೆ ಹೊಂದಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಭಾರತವು ಹಲವು ಸಂಸ್ಕೃತಿಯ ತವರು ನೆಲ. ಧಾರ್ಮಿಕ ಬದುಕನ್ನು ಒಪ್ಪಿಕೊಂಡು ಅಪ್ಪಿಕೊಂಡಂತಹ ಅಖಂಡ ಭೂಮಂಡಲವೇ ತನ್ನದೆಂದು ಭಾವಿಸಿಕೊಂಡ ಗುರೂಜಿ ಆಗಮನದಿಂದ ನಮ್ಮ ಭೂಮಿ, ಬದುಕು ಧನ್ಯವಾಗಿದೆ ಎಂದರು.
ಗುರೂಜಿ ಅವರ ಆಪ್ತ ಕಾರ್ಯದರ್ಶಿ ಕಿಶೋರ್ ಪ್ರಸಾದ್, ಸ್ವಾಮಿ ಬ್ರಹ್ಮಪಾದಾಜಿ ಶಿವಮೊಗ್ಗ, ಶಿಕ್ಷಕ ವಾಸುದೇವ ಶೆಣೈ, ರಾಧಾ ಶೆಣೈ, ರಾಜ್ಯ ಸಂಯೋಜಕ ವಸಂತ್ ಕುಮಾರ್, ಆಡಳಿತ ಮಂಡಳಿ ಸದಸ್ಯ ರಮಾನಾಥ ರಾವ್, ಆರ್ಟ್ ಆಫ್ ಲಿವಿಂಗ್ ತಂಡದ ಶಿಕ್ಷಕರು, ಸದಸ್ಯರು, ಕಾರ್ಯಕರ್ತರು ಸತ್ಸಂಗದಲ್ಲಿ ಸಹಕರಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ತಹಶೀಲ್ದಾರ್ ಡಾ.ಪ್ರತಿಭಾ ಆರ್, ಉದ್ಯಮಿ ಪ್ರಕಾಶ್ ಶೆಟ್ಟಿ ಬಂಜಾರ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೂನಾ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಹಳೇ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈ, ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಶೇಖರ ಆಚಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಹಾಜರಿದ್ದರು.