ನವದೆಹಲಿ: ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ, ಜೀವನದಲ್ಲಿ ಅಸಾಧಾರಣ ಪ್ರತಿಭೆ ಮತ್ತು ಪರಿಶ್ರಮವನ್ನು ಪ್ರದರ್ಶಿಸುವ ವ್ಯಕ್ತಿಗಳ ಬೆಂಬಲಕ್ಕೆ ನಿಂತು ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ಉದಾಹರಣೆಯಲ್ಲಿ, 4 ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ತೋಳುರಹಿತ ಮಹಿಳಾ ಬಿಲ್ಲುಗಾರ್ತಿ, ಭಾರತಕ್ಕೆ ಚಿನ್ನದ ಪದಕಗಳನ್ನು ಭದ್ರಪಡಿಸಿದ ಗಮನಾರ್ಹ ಮತ್ತು ಅಸಾಮಾನ್ಯ ಪ್ರತಿಭೆ ಶೀತಲ್ ದೇವಿ ಅವರಿಗೆ ವ್ಯಾಪಾರ ಉದ್ಯಮಿ ತಮ್ಮ ತುಂಬು ಹೃದಯದ ಶುಭಾಶಯಗಳನ್ನು ತಿಳಿಸುತ್ತಾ ತಮ್ಮ ಕಂಪನಿಯ ಕಾರುಗಳಲ್ಲಿ ಆಕೆಗೆ ಇಷ್ಟಬಂದ ಯಾವುದೇ ಕಾರನ್ನು ಆಯ್ಕೆ ಮಾಡುವಂತೆ ತಿಳಿಸಿದ್ದಾರೆ. ಮಾತ್ರವಲ್ಲ, ಈ ಕಾರನ್ನು ಆಕೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡುವ ಭರವಸೆ ನೀಡಿದ್ದಾರೆ.
ಜೀವನದಲ್ಲಿ ಸಣ್ಣ ಪುಟ್ಟ ತೊಂದರೆಗಳಿಗೆ ಗೊಣಗಾಡುವ ನಾವೆಲ್ಲರೂ ಶೀತಲ್ ದೇವಿಯಿಂದ ಪಾಠ ಕಲಿಯಬೇಕು ಎನ್ನುವ ಅವರು ತಾನು ಜೀವನದಲ್ಲಿ ಇನ್ನೆಂದೂ ತೊಂದರೆಗಳ ಬಗ್ಗೆ ಆಕ್ಷೇಪಿಸುವುದಿಲ್ಲ ಎಂದಿದ್ದಾರೆ.
“ನನ್ನ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ನಾನು ಇನ್ನೆಂದೂ ದೂರುವುದಿಲ್ಲ. ಶೀತಲ್ ದೇವಿ ನೀವು ನಮಗೆಲ್ಲ ಗುರುವಾಗಿದ್ದೀರಿ. ದಯವಿಟ್ಟು ನಮ್ಮ ಶ್ರೇಣಿಯಿಂದ ಯಾವುದೇ ಕಾರನ್ನು ಆರಿಸಿ ಮತ್ತು ನಾವು ಅದನ್ನು ನಿಮಗೆ ನೀಡುತ್ತೇವೆ ಮತ್ತು ನಿಮ್ಮ ಬಳಕೆಗಾಗಿ ಅದನ್ನು ಕಸ್ಟಮೈಸ್ ಮಾಡುತ್ತೇವೆ” ಎಂದು ಅವರು X ನಲ್ಲಿ ಬರೆದುಕೊಂಡಿದ್ದಾರೆ.
ಶುಕ್ರವಾರ (ಅಕ್ಟೋಬರ್ 27), ಹಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬಿಲ್ಲುಗಾರಿಕೆಯ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ಈವೆಂಟ್‌ನಲ್ಲಿ ಜಮ್ಮ-ಕಾಶ್ಮೀರದ 17 ವರ್ಷದ ಶೀತಲ್ ದೇವಿ ಚಿನ್ನದ ಪದಕವನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಹಿಂದಿನ ದಿನ (ಅಕ್ಟೋಬರ್ 26 ರಂದು), ಅವರು ಮತ್ತು ರಾಕೇಶ್ ಕುಮಾರ್ ಮಿಶ್ರ ತಂಡ ಸಂಯುಕ್ತ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು. ಮತ್ತು ಅದಕ್ಕೂ ಹಿಂದಿನ ದಿನ ಸರಿತಾ ಜೊತೆಗೆ ಮಹಿಳೆಯರ ಡಬಲ್ಸ್ ಕಾಂಪೌಂಡ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದರು.












