ವೈದ್ಯರೇ ಕೈಚೆಲ್ಲಿದರೂ ಕೈಬಿಡದ ಕೊರಗಜ್ಜ: ಉಕ್ರೇನಿನ ಅನಾರೋಗ್ಯ ಪೀಡಿತ ಮಗುವೀಗ ಸಂಪೂರ್ಣ ಸ್ವಸ್ಥ!

ಬಂಟ್ವಾಳ: ಅವಿಭಜಿತ ದ.ಕ ಜಿಲ್ಲೆಯಲ್ಲಿ ಕೊರಗಜ್ಜನ ಕಾರ್ನಿಕ ತಿಳಿಯದೆ ಇರುವವರು ವಿರಳ. ಕಳೆದು ಹೋದ ವಸ್ತುಗಳು ಮರಳಿ ಸಿಗಬೇಕಾದಲ್ಲಿ ಕೊರಗಜ್ಜನಿಗೆ ಒಂದು ಹರಕೆ ಹೇಳಿದರೆ ಸಾಕು, ಕಳೆದು ಹೋದ ವಸ್ತು ಯಾವ ಮಾಯೆಯಲ್ಲೋ ಪ್ರತ್ಯಕ್ಷ!! ಇಂತಿಪ್ಪ ಕೊರಗಜ್ಜ ಈಗ ಉಕ್ರೇನಿನ ಮಗುವಿನ ಜೀವವನ್ನೂ ಉಳಿಸಿ ಮತ್ತೊಮ್ಮೆ ಕಾರ್ನಿಕ ಮೆರೆದಿದೆ.

ಪ್ರಕರಣ:

ಕೆಲವು ತಿಂಗಳ ಹಿಂದೆ ಉಕ್ರೇನ್ ದೇಶದ ಪ್ರಜೆ ಆ್ಯಂಡ್ರ್ಯೂ, ಪತ್ನಿ ಎಲೆನಾ ಮತ್ತು ಮಗ ಮ್ಯಾಕ್ಸಿಂ ಭಾರತಕ್ಕೆ ಪ್ರವಾಸ ಬಂದಿದ್ದರು. ಉಕ್ರೇನ್ ದಂಪತಿ ತನ್ನ ಮಗನ ಮ್ಯಾಕ್ಸಿಂ ನರದ ಸಮಸ್ಯೆಯ ಚಿಕಿತ್ಸೆಗಾಗಿ ನಾಡಿ ನೋಡಿ ಔಷದಿ ಕೊಡುವ ಭಕ್ತಿಭೂಷಣ್ ಪ್ರಭೂಜಿ ಅವರನ್ನು ಭೇಟಿ ಮಾಡಿದ್ದರು. ಮಾಕ್ಸಿಂಗೆ ಚಿಕಿತ್ಸೆಯ ಭಾಗವಾಗಿ ದೇಸೀ ದನದ ವಿಹಾರದ ಜೊತೆಗೆ ನಾಟಿ ಚಿಕಿತ್ಸೆಯನ್ನು ಪ್ರಭೂಜಿ ಆರಂಭಿಸಿದ್ದರು. ಈ ಚಿಕಿತ್ಸೆಗಾಗಿ ಕಳೆದ ಮೂರು ತಿಂಗಳಿಂದ ಬಂಟ್ವಾಳದ ಕುಮ್ಡೇಲುವಿನ ಶ್ರೀ ರಾಧಾ ಸುರಭೀ ಗೋ ಮಂದಿರದಲ್ಲಿ ವಾಸ್ತವ್ಯ ಹೂಡಿತ್ತು ಉಕ್ರೇನಿನ ಈ ಕುಟುಂಬ.

ಜನ್ಮಾಷ್ಟಮಿಯ ಸಂದರ್ಭದಲ್ಲಿ ನಡೆದ ಕೊರಗಜ್ಜನ ಕೋಲವೊಂದರಲ್ಲಿ ಮಗನ ಆನಾರೋಗ್ಯ ಸಮಸ್ಯೆ ಪರಿಹಾರವಾಗಲಿ ಎಂದು ದಂಪತಿಗಳು ಬೇಡಿಕೊಂಡಿದ್ದು, ಮಗು ಹುಷಾರದಾರೆ ಕೊರಗಜ್ಜನಿಗೆ ಅಗೇಲು ಸೇವೆ ಕೊಡುವುದಾಗಿ ಹರಕೆ ಹೊತ್ತಿದ್ದರು. ಪವಾಡವೆಂಬತೆ ಮಗ ಮಾಕ್ಸಿಂ ಗುಣಮುಖನಾಗಿದ್ದು, ಉಕ್ರೇನ್ ದಂಪತಿ ಪುದು ಗ್ರಾಮದ ಕೊಡ್ಮಣ್ಣು ಎಂಬಲ್ಲಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದ್ದಾರೆ. ಕೊರಗಜ್ಜನ ದಯೆಯಿಂದ ಮಗು ಗುಣಮುಖನಾದನೆಂಬ ಸಂತೃಪ್ತ ಭಾವದಿಂದ ಕುಟುಂಬ ತಮ್ಮ ಸ್ವದೇಶಕ್ಕೆ ಮರಳಲಿದೆ.

ಈ ಕುಟುಂಬವು ಉಡುಪಿಯಲ್ಲಿ ವೈದ್ಯರಿಗೆ ತಮ್ಮ ಮಗುವನ್ನು ತೋರಿಸಿದ್ದಾಗ, ಮಗು ಬದುಕುಳಿಯುವು ಕಷ್ಟ ಎಂದು ವೈದ್ಯರು ಕೈಚೆಲ್ಲಿದ್ದರು. ಎದೆಗುಂದದ ಪೋಷಕರು ಮಗುವನ್ನು ಕೊರಗಜ್ಜನ ಮಡಿಲಿಗೆ ಹಾಕಿ, ಅಜ್ಜನ ಪ್ರಸಾದವನ್ನು ಮಗುವಿಗೆ ಕೊಟ್ಟಿದ್ದರು ಜೊತೆಗೆ ನಾಟಿ ಚಿಕಿತ್ಸೆಯನ್ನೂ ಮುಂದುವರಿಸಿದ್ದರು. ವಿಜ್ಞಾನ ಮತ್ತು ನಂಬಿಕೆಗಳೆರಡೂ ಜೊತೆ ಜೊತೆಯಲ್ಲೇ ಸಾಗುವಂತೆ, ವೈದ್ಯರ ಚಿಕಿತ್ಸೆ ಮತ್ತು ಕೊರಗಜ್ಜನ ಮೇಲಿದ್ದ ಕುಟುಂಬದ ನಂಬಿಕೆ ಇವೆರಡರಿಂದಲೂ ಮಗು ಬದುಕುಳಿದಿದೆ ಮತ್ತು ಸಂಪೂರ್ಣವಾಗಿ ಸ್ವಸ್ಥವಾಗಿದೆ ಎನ್ನಲಾಗಿದೆ. ನಂಬಿಕೆಯೆ ದೇವರು. ನಂಬಿದವರಿಗೆ ಇಂಬು ಕೊಡುವುದೆ ತುಳುನಾಡಿನ ದೈವ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.