ಕಾಪು: ಇದೇ ಮೊದಲ ಬಾರಿಗೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನವದುರ್ಗಾ ಸಹಿತ ಶಾರದಾ ಮಾತೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ನವರಾತ್ರಿಯ ಅಂತಿಮ ದಿನವಾದ ವಿಜಯದಶಮಿಯಂದು ದೇವಿಯರ ವಿಸರ್ಜನಾ ಕಾರ್ಯಕ್ರಮವು ಕಾಪು ಕಡಲ ತೀರದಲ್ಲಿ ಜರುಗಿತು. ದೇವಿಯರ ಜಲಸ್ತಂಭನದ ವೇಳೆಯಲ್ಲಿ ಜಿಲ್ಲೆಯು ಅಭೂತಪೂರ್ವ ದೃಶ್ಯವೊಂದಕ್ಕೆ ಸಾಕ್ಷಿಯಾಯಿತು. ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಸಲಾಗುವ ಗಂಗಾ ಆರತಿ ಮಾದರಿಯಲ್ಲಿ ಶಾರದಾ ಮಾತೆ ಸಹಿತ ನವದುರ್ಗೆಯರಿಗೆ ಏಕಕಾಲದಲ್ಲಿ ಆರತಿ ಬೆಳಗುವ ಮೂಲಕ ಹೊಸ ಇತಿಹಾಸವೊಂದನ್ನು ಕರಾವಳಿಯ ಕಡಲ ಕಿನಾರೆಯಲ್ಲಿ ಸೃಷ್ಠಿಸಲಾಯಿತು.
ದೇವಿಯರ ವೈಭವದ ಶೋಭಾ ಯಾತ್ರೆಗೆ ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಜಿ. ಶಂಕರ್ ಚಾಲನೆ ನೀಡಿದರು.
ಪ್ರಧಾನ ತಂತ್ರಿ ವೇ. ಮೂ. ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಮತ್ತು ಪ್ರಧಾನ ಅರ್ಚಕ ವೇ. ಮೂ. ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶಾರದಾ ಮಾತೆ ಮತ್ತು ನವದುರ್ಗೆಯರ ಮೂರ್ತಿಗಳ ಶೋಭಾಯಾತ್ರೆ ನಡೆಯಿತು.
ಶೋಭಾಯಾತ್ರೆ ಮತ್ತು ಗಂಗಾ ಆರತಿಯನ್ನು ಬೆಳಗುವ ಮನಮೋಹಕ ದೃಶ್ಯವನ್ನು ಭಕ್ತರೆಲ್ಲರೂ ಕಣ್ಮನದಲ್ಲಿ ತುಂಬಿಕೊಂಡು ಕೃತಾರ್ಥರಾದರು. ಉಚ್ಚಿಲ ದೇವಸ್ಥಾನದಿಂದ ಹೊರಟ ಭವ್ಯಮೆರವಣಿಗೆ ಆಕರ್ಷಕ ಟ್ಯಾಬ್ಲೋ ಗಳು ಮತ್ತು ಹೆಲಿಕಾಪ್ಟರ್ ನಿಂದ ನಡೆಸಲಾದ ಪುಷ್ಪವೃಷ್ಠಿ ಭಕ್ತರ ಮನವನ್ನು ರಂಜಿಸಿದವು. ಕಂಡು ಕೇಳರಿಯದ ರೀತಿಯಲ್ಲಿ ವೈಭವೋಪೇತ ದಸರಾ ಹಬ್ಬದ ಸಂಭ್ರಮಕ್ಕೆ ತೆರೆಬಿದ್ದಿದ್ದು, ಮುಂದಿನ ವರ್ಷ ಶಾರದೆಯ ಬರುವಿಕೆಗೆ ಜನರೆಲ್ಲಾ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಶಾಸಕರಾದ ಲಾಲಾಜಿ ಆರ್. ಮೆಂಡನ್, ರಘುಪತಿ ಭಟ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ, ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ದೇವಿಪ್ರಸಾದ್ ಶೆಟ್ಟಿ ಬೆಳಪು, ದ.ಕ. ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳಾದ ಸುಭಾಶ್ಚಂದ್ರ ಕಾಂಚನ್, ಸುಧಾಕರ ಕುಂದರ್, ಭರತ್ ಎರ್ಮಾಳು, ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಸಾಲ್ಯಾನ್, ಪ್ರಮುಖರಾದ ಶಂಕರ್ ಸಾಲ್ಯಾನ್, ಮೋಹನ್ ಬೆಂಗ್ರೆ, ಉಮೇಶ್ ಟಿ. ಕರ್ಕೇರ, ಭರತ್ ಉಳ್ಳಾಲ, ಸತೀಶ್ ಕುಂದರ್, ಶರಣ್ ಮಟ್ಟು, ಶ್ರೀಪತಿ ಭಟ್, ಸತೀಶ್ ಅಮೀನ್ ಪಾಲ್ಗೊಂಡಿದ್ದರು.