ಸುಬ್ರಹ್ಮಣ್ಯ: ಇಲ್ಲಿನ ಪುಷ್ಪಗಿರಿ ತಪ್ಪಲು ಪ್ರದೇಶದ ಹಲವು ಕಡೆಗಳಲ್ಲಿ ಭಾನುವಾರ ರಾತ್ರಿ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಇದರಿಂದ ಈ ಭಾಗದ ಜನರು ಭಾರಿ ಆತಂಕಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲೆಯಯ ಗಡಿಭಾಗದಲ್ಲಿ ಬರುವ ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು ಮೊದಲಾದ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಮನೆಯಲ್ಲಿದ್ದ ಪಾತ್ರೆ, ಸಾಮಾನುಗಳು ಏಕಾಎಕಿಯಾಗಿ ಅಲುಗಾಡಿದ್ದು, ಭೂಗರ್ಭದಿಂದ ಸದ್ದು ಕೇಳಿಬಂದಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಭಾರಿ ಜಲಸ್ಫೋಟ ಉಂಟಾಗಿತ್ತು. ಇದೀಗ ಮತ್ತೆ ಭೂಕಂಪನ ಶಬ್ಧದ ಉಂಟಾಗಿರುವುದು ಜನರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ.
ಯಾವ ಕಾರಣದಿಂದ ಈ ರೀತಿಯ ಕಂಪನ ಉಂಟಾಗಿದೆ ಎಂದು ಇನ್ನು ತಿಳಿದುಬಂದಿಲ್ಲ. ಭೂ ವಿಜ್ಞಾನಿಗಳು ಬಂದು ಅಧ್ಯಯನ ಮಾಡಿದ ಬಳಿಕವೇ ಘಟನೆಗೆ ನಿಖರ ಕಾರಣ ತಿಳಿದು ಬರುವ ಸಾಧ್ಯತೆ ಇದೆ.