ಮಂಗಳೂರು: ಒಳ ಉಡುಪಿನಲ್ಲಿಟ್ಟು 1.69 ಕೋಟಿ ರೂ ಮೌಲ್ಯದ ವಜ್ರ ಅಕ್ರಮ ಸಾಗಾಟ ಯತ್ನ; ವ್ಯಕ್ತಿ ಸೆರೆ

ಮಂಗಳೂರು: ದಿನಂಪ್ರತಿ ಅಕ್ರಮ ಚಿನ್ನ ಸಾಗಾಟದ ಘಟನೆಗಳು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುತ್ತವೆ. ಆದರೀಗ ವ್ಯಕ್ತಿಯೋರ್ವ ತನ್ನ ಒಳ ಉಡುಪಿನಲ್ಲಿ ಕೋಟ್ಯಾಂತರ ರೂ. ಮೌಲ್ಯದ ವಜ್ರವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಘಟನೆ ನಡೆದಿದ್ದು, ಪ್ರಯಾಣಿಕನೊಬ್ಬನಿಂದ 1.69 ಕೋಟಿ ರೂ.ಮೌಲ್ಯದ ವಜ್ರದ ಹರಳುಗಳನ್ನು ಜಪ್ತಿ ಮಾಡಲಾಗಿದೆ.

ಮೇ 25ರಂದು ದುಬೈಗೆ ತೆರಳಬೇಕಿದ್ದ ವ್ಯಕ್ತಿಯೋರ್ವ ವಜ್ರಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದು, ಆತನನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.

ದುಬೈಗೆ ತೆರಳಲಿದ್ದ ಪ್ರಯಾಣಿಕನನ್ನು ಸಿಐಎಸ್ಎಫ್ ಸಿಬ್ಬಂದಿ ತಪಾಸಣೆ ನಡೆಸುವಾಗ ಆತನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದನೆನ್ನಲಾದ ಎರಡು ಪೊಟ್ಟಣಗಳಲ್ಲಿ ಹರಳುಗಳಿದ್ದುದು ಕಂಡುಬಂತು. ಪೊಟ್ಟಣಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರೊಳಗೆ 13 ಸಣ್ಣ ಪೊಟ್ಟಣಗಳಲ್ಲಿ ವಜ್ರದ ಹರಳುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿತ್ತು. ಭದ್ರತಾ ಸಿಬ್ಬಂದಿ ಕಾಸರಗೋಡಿನ ಪ್ರಯಾಣಿಕನನ್ನು ವಶಕ್ಕೆ ಪಡೆದು, ಕಸ್ಟಮ್ಸ್ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಿದ್ದರು.

13 ಚಿಕ್ಕ ಪೊಟ್ಟಣಗಳಲ್ಲಿ ಒಟ್ಟು 306.21 ಕ್ಯಾರೆಟ್‌ಗಳಷ್ಟು ತೂಕದ ವಿವಿಧ ಗಾತ್ರದ ವಜ್ರಗಳು ಕಂಡುಬಂದಿದ್ದು, ಇದರ ಮೌಲ್ಯ 1.69 ಕೋಟಿ ರೂ. ಎಂದು ಅಂದಾಜಿಸಲಾಗಿದೆ.