ಭಾರತವು ಪ್ರತಿ ವರ್ಷ ಆಗಸ್ಟ್ 15ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ನಮ್ಮ ಸ್ವಾತಂತ್ರ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ಸ್ವಾತಂತ್ರ ದಿನವು ನೆನಪಿಸುತ್ತದೆ. 15 ಆಗಸ್ಟ್ 1947 ರಂದು, ಭಾರತವನ್ನು ಬ್ರಿಟಿಷ್ ವಸಾಹತುಶಾಹಿಯಿಂದ ಸ್ವತಂತ್ರವೆಂದು ಘೋಷಿಸಲಾಯಿತು ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿತು. ಈ ಬಾರಿ 2022ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ.
ಇಂಥ ಸುಸಂದರ್ಭದಲ್ಲಿ ನಾವು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಕೂಡ ಅತೀ ಮುಖ್ಯವಾಗಿದೆ. 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪರಿಸರ ಕಾಳಜಿಯ ಬಗ್ಗೆ ಕೆಲವು ಪ್ರತಿಜ್ಞೆಗಳನ್ನು ನಾವು ಮಾಡಬೇಕಾಗಿದೆ. ಪ್ಲಾಸ್ಟಿಕ್ ಧ್ವಜದ ಬಳಕೆಯನ್ನು ನಾವು ಮಾಡಬಾರದು, ಯಾವುದೇ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ತಟ್ಟೆ- ಲೋಟ ಮುಂತಾದ ವಸ್ತುಗಳನ್ನು ಬಳಸುವ ಬದಲು ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಿದ ಜೈವಿಕ ವಿಘಟನೆಯ ವಸ್ತುಗಳ ಬಳಕೆಯನ್ನು ಮಾಡಬೇಕು.
ನಾವು ಗಿಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಬೇಕು, ಏಕೆಂದರೆ ಅರಣ್ಯ ನಾಶದಿಂದಾಗಿ ವಾತಾವರಣದಲ್ಲಿ ಏರು-ಪೇರು ಉಂಟಾಗುತ್ತಿದೆ. ಇದರಿಂದಾಗಿ ಹಲವಾರು ರೀತಿಯಾದ ತೊಂದರೆಗಳನ್ನು ಮನುಕುಲವು ಎದುರಿಸುತ್ತಿದೆ. ಇಷ್ಟೆಲ್ಲಾ ತೊಂದರೆಗಳನ್ನು ಅನುಭವಿಸಿದ ಮೇಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಪೀಳಿಗೆಯು ಭಾರಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
ಈ ಸುದಿನ ಸಮಯದಲ್ಲಿ ನಾವೆಲ್ಲರೂ ಒಂದು ಪ್ರತಿಜ್ಞೆಯನ್ನು ಮಾಡೋಣ, ಅದೇನೆಂದರೆ ನಾವೆಲ್ಲರೂ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಪರಿಸರವನ್ನು ಸ್ವಚ್ಛವಾಗಿ ಇಡುವುದರೊಂದಿಗೆ ಪರಿಸರಸ್ನೇಹಿ ವಸ್ತುಗಳ ಬಳಕೆಯನ್ನು ಹೆಚ್ಚಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ .ಈ ರೀತಿಯಾಗಿ ನಾವು ಪರಿಸರಕ್ಕಾಗಿರುವ ಹಾನಿಯನ್ನು ಸ್ವಲ್ಪ ಮಟ್ಟಿಗಾದರೂ ತಗ್ಗಿಸಲು ಸಾಧ್ಯವಾಗುತ್ತದೆ.
ಗಾಯತ್ರಿ. ಕೆ
ಪತ್ರಿಕೋದ್ಯಮ ವಿಭಾಗ
ಭಂಡಾರ್ಕರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜ್
ಕುಂದಾಪುರ