ಜ.30ರಿಂದ ಫೆ.1ರವರೆಗೆ ಮಾಹೆಯಲ್ಲಿ ಅಮೃತ ಯುವ ಕಲೋತ್ಸವ-ಸಾಂಸ್ಕೃತಿಕ ಉತ್ಸವ

ಮಣಿಪಾಲ: ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಸಹಯೋಗದೊಂದಿಗೆ ಭಾರತದ 75ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಮೂರು ದಿನಗಳ ಯುವ ಸಾಂಸ್ಕೃತಿಕ ಉತ್ಸವ – ‘ಅಮೃತ ಯುವ ಕಲೋತ್ಸವ’ವನ್ನು ಜನವರಿ 30, 31 ಮತ್ತು ಫೆಬ್ರವರಿ 1ರಂದು ಮಣಿಪಾಲದಲ್ಲಿ ವಿಭಿನ್ನ ರೀತಿಯಲ್ಲಿ ಆಯೋಜಿಸುತ್ತಿದೆ. ಭಾರತದಾದ್ಯಂತ 75ನೇ
ಸ್ವಾತಂತ್ರೋತ್ಸವದ ವರ್ಷಾಚರಣೆಯ ಸರಣಿಯಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಇದು ಆಯೋಜಿಸಲ್ಪಡುತ್ತಿದೆ.

ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆ ಡಾ ಸಂಧ್ಯಾ ಪುರೇಚ ಅವರು ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ
ಕ್ಯಾಂಪಸ್‌ನಲ್ಲಿರುವ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಜನವರಿ 30 ರಂದು ಸಂಜೆ 5.30 ಕ್ಕೆ ಕಲೋತ್ಸವವನ್ನು
ಉದ್ಘಾಟಿಸಲಿದ್ದಾರೆ. ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮತ್ತು ಮಾಹೆಯ ಯುನೆಸ್ಕೋ ಶಾಂತಿ ಪೀಠದ ಪ್ರೊ.ಎಂ.ಡಿ.ನಲಪತ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಅಕಾಡೆಮಿ ಉಪ ಕಾರ್ಯದರ್ಶಿ ಹೆಲೆನ್ ಆಚಾರ್ಯ ಮತ್ತು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ‘ಕಾಮನಬಿಲ್ಲಿನ’ ಕಲಾವರ್ಣತೆಯನ್ನು ಪ್ರತಿನಿಧಿಸುವಂತೆ ದೇಶದ ವಿವಿಧ ಭಾಗಗಳ ಕಲಾವಿದರು ವೈವಿಧ್ಯತೆಯನ್ನು ಪ್ರತಿನಿಧಿಸುತ್ತಾ ವಿಶ್ವವಿದ್ಯಾನಿಲಯದ ಊರು ಮಣಿಪಾಲದಲ್ಲಿ ಮೂರು ದಿನಗಳ ಕಲಾಪ್ರದರ್ಶನವನ್ನು ನಡೆಸಿಕೊಡಲಿದ್ದಾರೆ. ಪ್ರಾಥಮಿಕವಾಗಿ ಯುವ ಜನತೆಯೊಂದಿಗೆ ಬಾಂಧವ್ಯ ಸಾಧಿಸುವ ಮಹೋನ್ನತ ಉದ್ದೇಶದೊಂದಿಗೆ ಇದು ಸಂಸ್ಥೆಯ ಬಹುವೈವಿದ್ಯದ ಸ್ವಭಾವವಕ್ಕೆ ಒತ್ತು ನೀಡುತ್ತಿದೆ. ಇಂತಹ ಕಲೋತ್ಸವವನ್ನು ಆಯೋಜಿಸಲಾಗುತ್ತಿರುವ ದೇಶದ ಹಲವು ಸ್ಥಳಗಳಲ್ಲಿ ಕರ್ನಾಟಕದಿಂದ ಆಯ್ಕೆಯಾದ ಮೊದಲ ಸ್ಥಳ ಮಣಿಪಾಲ ಎಂದರು.

ಫೆಬ್ರವರಿ 1ರಂದು ಸಂಜೆ 5.30 ಕ್ಕೆ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಈ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು ಮಾಹೆಯ ಕುಲಸಚಿವ ಡಾ ಗಿರಿಧರ್ ಕಿಣಿ, ಮಗಧ ವಿಶ್ವವಿದ್ಯಾಲಯದ ಪ್ರೊ. ಅಶೋಕ್ ಕುಮಾರ್ ಸಿನ್ಹಾ, ಮಾಹೆ ಸಂಸ್ಕೃತಿ ಸಮಿತಿ ಅಧ್ಯಕ್ಷೆ ಡಾ ಶೋಭಾ ಯು ಕಾಮತ್ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕಾರ್ಯಕ್ರಮವನ್ನು ಯೂಟ್ಯೂಬ್‌ ನೇರಪ್ರಸಾರದಲ್ಲಿಯೂ ವೀಕ್ಷಿಸಬಹುದು ಎಂದು ಹೀರೇಗಂಗೆ ಜಂತಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ಕಳರಿಪಯಟ್ಟು, ಭರತನಾಟ್ಯ, ವಾದ್ಯ ಸಂಗೀತ, ಯಕ್ಷಗಾನ, ನಾಟಕ, ಸಿದ್ಧಿ ಧಮಾಮಿ ನೃತ್ಯ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ, ಕೂಚಿಪುಡಿ, ಕರಡಿ ಮಜಲು ಪ್ರದರ್ಶಗೊಳ್ಳಲಿವೆ ಮತ್ತು ಡಾ.ಎಚ್.ಎಸ್.ಶಿವಪ್ರಕಾಶ್, ಕೆರೆಮನೆ ಶಿವಾನಂದ್ ಹೆಗ್ಡೆ, ಡಾ.ಪ್ರಭಾಕರ ಜೋಶಿ, ಡಾ.ವಸಂತ ಭಾರಧ್ವಾಜ್, ಡಾ.ಆರ್ತಿ ಶೆಟ್ಟಿ ಮತ್ತು ಮಧು ನಟರಾಜ್ ಅವರಿಂದ ಕಲಾವಿಮರ್ಶೆಯ ಕುರಿತ ಕಾರ್ಯಾಗಾರ ನಡೆಯಲಿದೆ.

ಸಂಗೀತ ನಾಟಕ ಅಕಾಡೆಮಿಯು ಭಾರತದಾದ್ಯಂತ ಯುವ ಕಲಾವಿದರನ್ನು ಮತ್ತು ಅಸಂಖ್ಯಾತ ಕಲಾ ಪ್ರಕಾರಗಳನ್ನು ಪ್ರದರ್ಶಿಸುವ ಉತ್ಸವಗಳ ಸರಣಿ- ‘ಅಮೃತ ಯುವ ಕಲೋತ್ಸವ’ವನ್ನು ಆಯೋಜಿಸುತ್ತಿದೆ. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮಾಹೆಯ ಅಂಗ ಸಂಸ್ಥೆಯಾಗಿದ್ದು, ಅಂತರಶಿಸ್ತೀಯ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದೆ. ಪರಿಸರ, ಸೌಂದರ್ಯಶಾಸ್ತ್ರ ಮತ್ತು ಶಾಂತಿ ಇಲ್ಲಿನ ಮುಖ್ಯ ಬೋಧನಾ ಕ್ಷೇತ್ರಗಳಾಗಿದ್ದು, ಕಲಾಪತ್ರಿಕೋದ್ಯಮಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ. ಎಂಎ (ಇಕಾಸೊಫಿಕಲ್ ಎಸ್ಥೆಟಿಕ್ಸ್), ಎಂಎ (ಆರ್ಟ್ ಅಂಡ್ ಪೀಸ್ ಸ್ಟಡೀಸ್), ಬಿಎ (ಎಸ್ಥೆಟಿಕ್ಸ್ ಅಂಡ್ ಪೀಸ್ ಸ್ಟಡೀಸ್) ಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮಗಳಾಗಿವೆ.