21 ಡಿಸಿಸಿ ಬ್ಯಾಂಕ್ ಗಳಲ್ಲಿ ಮಂಗಳೂರು ಡಿಸಿಸಿ ಬ್ಯಾಂಕ್ ಒಂದನೇ ಸ್ಥಾನದಲ್ಲಿದೆ: ಎಸ್.ಟಿ ಸೋಮಶೇಖರ್

ಮಂಗಳೂರು: ಎಲ್ಲಾ ಕ್ಷೇತ್ರದಲ್ಲಿ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದ್ದು, ಸಹಕಾರ ಕ್ಷೇತ್ರದಲ್ಲಿ ಭಾರತದಲ್ಲಿಯೆ ಕರ್ನಾಟಕ ಎರಡನೇ ಮುಂಚೂಣಿ ರಾಜ್ಯವಾಗಿರುವುದು ನಮ್ಮೆಲ್ಲರ ಹೆಮ್ಮೆ. ಇಲ್ಲಿ ಠೇವಣಿದಾರರ ವಿಶ್ವಾಸ ಉಳಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.

ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ-2022 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರ ಜೀವಂತವಾಗಿರುವುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಮಂಗಳೂರು ಭಾಗದಲ್ಲಿ ಸಹಕಾರ ಕ್ಷೇತ್ರ ಗಟ್ಟಿಯಾಗಿದೆ. ಸಹಕಾರ ಕ್ಷೇತ್ರ ಸಹಸ್ರಾರು ಜನರಿಗೆ ಉದ್ಯೋಗವಕಾಶ ಕಲ್ಪಿಸುವುದರ ಜೊತೆಗೆ ಕೋಟ್ಯಂತರ ಜನರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ. 21 ಡಿಸಿಸಿ ಬ್ಯಾಂಕ್ ಗಳಲ್ಲಿ ಮಂಗಳೂರು ಡಿಸಿಸಿ ಬ್ಯಾಂಕ್ ಒಂದನೇ ಸ್ಥಾನದಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಸಹಕಾರಿ ಗಣ್ಯರಿಗೆ ಗೌರವ ಸಲ್ಲಿಸುವುದರ ಜೊತೆಗೆ ಪ್ರತಿವರ್ಷ ಸಹಕಾರ ರತ್ನ‌ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ರಾಜ್ಯದಲ್ಲಿನ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ ಬಹುತೇಕ ಬ್ಯಾಂಕುಗಳು ಎ ಶ್ರೇಣಿ ಹೊಂದಿರುವುದರ ಜೊತೆಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕ್ರೆಡಿಟ್ ಸೊಸೈಟಿ ಮತ್ತು ಡಿಸಿಸಿ ಬ್ಯಾಂಕ್ ಗಳು ಕೂಡ ಲಾಭದಲ್ಲಿವೆ. 3 ಲಕ್ಷ ಹೊಸ ರೈತರು ಸೇರಿದಂತೆ 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಈ ವರ್ಷ ವಿತರಣೆ ಮಾಡಲಾಗುತ್ತಿದೆ. ಸಹಕಾರಿಗಳ ಬೇಡಿಕೆಯಂತೆ ಯಶಸ್ವಿನಿ ಯೋಜನೆಯನ್ನು ಮರುಜಾರಿ ಮಾಡಿ 14ರಂದು ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 15 ಹಾಲು ಒಕ್ಕೂಟಗಳಿದ್ದು, ಸುಮಾರು 25 ಲಕ್ಷಕ್ಕೂ ಅಧಿಕ ಹೈನುಗಾರರು ಹಾಲು ಪೂರೈಕೆ ಮಾಡುತ್ತಿದ್ದಾರೆ. ರೈತರ ಆರ್ಥಿಕ ಅನುಕೂಲಕ್ಕಾಗಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ. ನಬಾರ್ಡ್ ನಿಂದ ನೀಡುವ ಸಾಲದ ಹಣ ದ್ವಿಗುಣ ಗೊಳಿಸಲು ಕ್ರಮವಹಿಸಲಾಗುತ್ತಿದೆ. ಸಾಲ ಪಡೆದವರಿಗೆ ಕಿರುಕುಳ ನೀಡುತ್ತಿಲ್ಲ. ರೈತರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. 90% ಡಿಸಿಸಿ ಬ್ಯಾಂಕ್, ವಿಶೇಷವಾಗಿ ಸ್ವಸಹಾಯ ಗುಂಪುಗಳಿಂದ 100% ಸಾಲ ಮರುಪಾವತಿ ಆಗುತ್ತಿದೆ ಎಂದು ಅವರು ಹೇಳಿದರು.

ರಾಜ್ಯ ಸಹಕಾರ ಮಾರಾಟ ಮಂಡಳಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಶಾಸಕ ವೇದವ್ಯಾಸ ಡಿ. ಕಾಮತ್, ಯು.ಟಿ.ಖಾದರ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳದ ಅಧ್ಯಕ್ಷ ಯಶ್ ಪಾಲ್ ಎ.ಸುವರ್ಣ, ಸಹಕಾರ ಸಂಘಗಳ ನಿಬಂಧಕ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ಮತ್ತು ಇತರರು ಉಪಸ್ಥಿತರಿದ್ದರು.