ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ

ಉಡುಪಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಸರಣಿ ಹತ್ಯೆಗಳ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. ಜನರ ಸುರಕ್ಷತೆಯನ್ನು ಖಾತ್ರಿಪಡಿಸುತ್ತಾ, ಭದ್ರತೆ ಮತ್ತು ಸ್ಥಳೀಯ ಗುಪ್ತಚರವನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಕಾಶ್ಮೀರಿ ಪಂಡಿತರಲ್ಲಿ ಹೆಚ್ಚುತ್ತಿರುವ ಅಸಮಾಧಾನ ಮತ್ತು ಕಣಿವೆಯಿಂದ ಹೊರಕ್ಕೆ ವರ್ಗಾವಣೆ ಮಾಡಬೇಕೆಂಬ ಅವರ ಬೇಡಿಕೆಯ ಬಗ್ಗೆ ಸರ್ಕಾರವು ಚಿಂತಿತವಾಗಿದೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಆದರೆ ಕಾಶ್ಮೀರ ಕಣಿವೆಯಿಂದ ಹೊರಕ್ಕೆ ಸ್ಥಳಾಂತರಿಸಲಾಗುವುದಿಲ್ಲ, ಇದರಿಂದ ಸರ್ಕಾರದ ಬಗ್ಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಕಾಶ್ಮೀರಿ ಪಂಡಿತ ಉದ್ಯೋಗಿಗಳನ್ನು ಕಣಿವೆಯಿಂದ ಸ್ಥಳಾಂತರಿಸುವ ಬೇಡಿಕೆಗೆ ಒಪ್ಪಿಗೆ ನೀಡುವ ಮೂಲಕ ಗಡಿಯಾಚೆಗಿನ ಯಾವುದೇ “ಜನಾಂಗೀಯ ಶುದ್ಧೀಕರಣ” ದಲ್ಲಿ ಸರ್ಕಾರವು ಭಾಗವಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ, ಭಯೋತ್ಪಾದಕ ದಾಳಿಗೆ ಒಳಗಾಗುವ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಮತ್ತು ಸ್ಥಳೀಯ ಗುಪ್ತಚರ ಮೂಲಗಳನ್ನು ಹೆಚ್ಚಿಸುವಂತೆ ನಿರ್ದೇಶನ ನೀಡಿದ ಗೃಹ ಮಂತ್ರಿ, ಸ್ಥಳೀಯರಲ್ಲಿ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು ಎನ್ನಲಾಗಿದೆ.

ಇದೆಲ್ಲದರ ಮಧ್ಯೆ ವಾರ್ಷಿಕ ಅಮರನಾಥ ಯಾತ್ರೆಯು ಜೂನ್ 30 ರಿಂದ ಆಗಸ್ಟ್ 11 ರವರೆಗೆ ನಿಗದಿಯಂತೆ ಮುಂದುವರಿಯಲಿದೆ, ಅದನ್ನು ಮುಂದೂಡುವ ಮೂಲಕ ಭಯೋತ್ಪಾದಕರ ಮನದಿಚ್ಛೆಯನ್ನು ಪೂರ್ತಿಗೊಳಿಸಿ ಅವರಾಡುವ ಆಟಕ್ಕೆ ಬೆದರಲು ಸಾಧ್ಯವಿಲ್ಲ ಎಂದು ನಿಶ್ಚಯಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕ ಅರವಿಂದ್ ಕುಮಾರ್, ಜೆಕೆ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಸಿಆರ್‌ಪಿಎಫ್ ಡೈರೆಕ್ಟರ್ ಜನರಲ್ ಕುಲದೀಪ್ ಸಿಂಗ್ ಮತ್ತು ಪಂಕಜ್ ಸಿಂಗ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.