ಮಂಗಳೂರು: ದ್ವಿಚಕ್ರ ವಾಹನದ ಹಿಂಬದಿ ಪುರುಷ ಸವಾರರ ನಿರ್ಬಂಧ ವಾಪಸ್; ಸಾರ್ವಜನಿಕರ ತೀವ್ರ ವಿರೋಧಕ್ಕೆ ಮಣಿದ ಪೊಲೀಸ್ ಇಲಾಖೆ

ಮಂಗಳೂರು: ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಾಳೆಯಿಂದ ಬೈಕ್​ನಲ್ಲಿ ಹಿಂಬದಿ ಪುರುಷ ಸವಾರರಿಗೆ ನಿರ್ಬಂಧಿಸಿದ ಆದೇಶವನ್ನು ಕೆಲವೇ ಗಂಟೆಗಳಲ್ಲಿ ವಾಪಸ್​​ ಪಡೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆ ನಡೆದ ಬಳಿಕ ಜಾರಿಯಲ್ಲಿದ್ದ ರಾತ್ರಿ ನಿಷೇಧಾಜ್ಞೆಯು ಕೂಡಾ ನಾಳೆ ಬೆಳಿಗ್ಗೆ ತೆರವಾಗಲಿದೆ.

ಇಂದು ಎಡಿಜಿಪಿ ಅಲೋಕ್ ಕುಮಾರ್ ಅವರು ನಡೆಸಿದ ಸಭೆಯ ಬಳಿಕ ರಾತ್ರಿ ಕರ್ಫ್ಯೂ ಸಡಿಲಿಕೆ ಬಳಿಕ ಬೈಕ್​​ನಲ್ಲಿ ಹಿಂಬದಿ ಯುವ ಪುರುಷ ಸವಾರರಿಗೆ ನಿರ್ಬಂಧ ವಿಧಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದರಂತೆ ಸಂಜೆ 4 ಗಂಟೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ , ವಾರದವರೆಗೆ 18 ವರ್ಷಕ್ಕೆ ಮೇಲ್ಪಟ್ಟ 60 ವರ್ಷದೊಳಗಿನ ಪುರುಷರ ಬೈಕ್​ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರು.

ಆದರೆ ಹಿಂಬದಿ ಸವಾರರಿಗೆ ನಿರ್ಬಂಧ ಹೇರಿದ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಲು ಆರಂಭವಾದ ಬಳಿಕ, ಈ ಆದೇಶವನ್ನು ಸಂಜೆ 5 ಗಂಟೆಯ ಮೊದಲೇ ವಾಪಸ್ ಪಡೆಯಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.