ಅಮೆರಿಕ ಅಧ್ಯಕ್ಷೀಯ ಚುನಾವಣೆ: ಹಿಂದೂಗಳ ಓಲೈಕೆಯಲ್ಲಿ ತೊಡಗಿದ ರಾಜಕೀಯ ನಾಯಕರು

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಹಾಲಿ ಅಧ್ಯಕ್ಷ , ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್ ಅವರು ‍ಚುನಾವಣಾ ಪ್ರಚಾರದಲ್ಲಿ ಹಿಂದೂಗಳ ಓಲೈಕೆಯಲ್ಲಿ ತೊಡಗಿದ್ದಾರೆ.

ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ (2016ರ ಪ್ರಕಾರ) ಶೇ. 1ರಷ್ಟಿರುವ ಹಿಂದೂ ಸಮುದಾಯವರನ್ನು ರಾಜಕೀಯ ನಾಯಕರು ಆಕರ್ಷಿಸುವ ಪ್ರಯತ್ನದಲ್ಲಿದ್ದಾರೆ.
ನಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದರೆ ಅಮೆರಿಕದಲ್ಲಿ ಹಿಂದೂಗಳಿಗೆ ಧಾರ್ಮಿಕ ಸ್ವಾತಂತ್ರ್ಯಕ್ಕಿರುವ ಅಡೆತಡೆಗಳನ್ನು ನಿವಾರಿಸುತ್ತೇವೆ ಎಂದು ಟ್ರಂಪ್ ಪರ ಚುನಾವಣಾ ಪ್ರಚಾರ ನಡೆಸುತ್ತಿರುವವರು ಭರವಸೆ ನೀಡಿದ್ದಾರೆ.

ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್ ಪರ ಪ್ರಚಾರಕರು ’ಹಿಂದೂಗಳ ನಂಬಿಕೆಗೆ ಆದ್ಯತೆ ನೀಡುತ್ತೇವೆ’ ಎಂದು ಹೇಳುತ್ತಿದ್ದಾರೆ.
ಈ ನಡುವೆ ಜೋ ಬೈಡೆನ್ ನೇತೃತ್ವದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಮೆರಿಕದಲ್ಲಿರುವ ಹಿಂದೂ ಸಮುದಾಯದ ಪ್ರಮುಖ ನಾಯಕಿ ನೀಲಿಮಾ ಗೋಣುಗುಂಟ್ಲಾ ಅವರು ಭಾಗವಹಿಸಿದ್ದರು. ಇದು ಬೈಡನ್ ಪಕ್ಷದಲ್ಲಿ ಹಿಂದೂ ಸಮುದಾಯದ ಬೆಂಬಲವನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ.