ಮಣಿಪಾಲದ ಮುನಿಯಾಲು ಆಯುರ್ವೇದ ಸಂಸ್ಥೆ ಸಂಶೋಧಿಸಿದ ಔಷಧಿಗೆ ಅಮೆರಿಕಾದ ಪೇಟೆಂಟ್

ಮಣಿಪಾಲ: ಮುನಿಯಾಲು ಆಯುರ್ವೇದ ಸಂಸ್ಥೆಯ ಅಧ್ಯಕ್ಷ ಡಾ. ಎಂ. ವಿಜಯಭಾನು ಶೆಟ್ಟಿಯವರು ಅಭಿವೃದ್ಧಿಪಡಿಸಿರುವ ಆರು ಸಂಶೋಧಿತ ಆಯುರ್ವೇದ ಔಷಧಿಗಳು ಹಾಗೂ ಒಂದು ಚಿಕಿತ್ಸಾ ಕ್ರಮಕ್ಕೆ ಅಮೇರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಎಂಡ್ ಟ್ರೇಡ್ ಮಾರ್ಕ್ ಆಫೀಸಿನಿಂದ ಇಪ್ಪತ್ತು ವರ್ಷಗಳ ಅವಧಿಯವರೆಗಿನ ಪೇಟ್‍ಂಟ್ ದೊರೆತಿದೆ.

ಹೃದಯಘಾತವನ್ನು ಜೀವಕಣದ ಜೀನ್ ಮಟ್ಟದಲ್ಲಿ ನಿಯಂತ್ರಿಸಬಲ್ಲ ಹಾರ್ಟೋಜನ್ ಮಾತ್ರೆಗಳು, ದೇಹದಲ್ಲಿ ಇನ್ಸುಲಿನ್ ಅನ್ನು ಪುನರುತ್ಪತ್ತಿಗೊಳಿಸಿ ಆ ಮೂಲಕ ಸಿಹಿಮೂತ್ರ ರೋಗ ನಿಯಂತ್ರಣ ಹಾಗೂ ದೇಹದ ಪ್ರಮುಖ ಅಂಗಗಳಿಗೆ ರಕ್ಷಣೆ ಕೊಡುವ ಇನ್ಸೋಲ್ –ಎನ್ ಮಾತ್ರೆಗಳು, ಲಿಪಿಡ್, ಕೊಲೆಸ್ಟ್ರಾಲ್ ಮತ್ತು ಬೊಜ್ಜು ನಿಯಂತ್ರಣದ ಹರ್ಬೋಟ್ರಿಮ್ ಮಾತ್ರೆಗಳು, ಬ್ಯಾಕ್ಟೀರಿಯ ಮತ್ತು ವೈರಸ್ ಸೋಂಕು ಬರದಂತೆ ನಿಯಂತ್ರಿಸುವ ಮುನಿಬಯೋಟಿಕ್ ಪ್ಲಸ್ ಮಾತ್ರೆಗಳು, ಸುಮಾರು 80ಕ್ಕೂ ಮೇಲ್ಪಟ್ಟ ವಿವಿಧ ತರಹದ ಕ್ಯಾನ್ಸರ್ ಗಳಲ್ಲಿ ಯಶಸ್ವಿಯಾಗಿ ಉಪಯೋಗಿಸಲ್ಪಟ್ಟ, ಶ್ವಾಸಕೋಶದ ಕ್ಯಾನ್ಸರ್‍ನಲ್ಲಿ ಅತ್ಯಂತ ಪರಿಣಾಮಕಾರಿಯೆಂದು ಕಂಡುಬಂದಿರುವ ಮುನೆಕ್ಸ್ ಮಾತ್ರೆಗಳು ಹಾಗೂ ಕ್ಯಾನ್ಸರ್ ಚಿಕಿತ್ಸಾ ಕ್ರಮವಾದ ಮಹೋಷಧ ಕಲ್ಪಕ್ಕೆ ಅಮೇರಿಕಾದ ಪೇಟೆಂಟ್ ಲಭಿಸಿದೆ.

ಮುನೆಕ್ಸ್ , ಇನ್‍ಸೋಲ್ – ಎನ್ ಹಾಗೂ ಹಾರ್ಟೋಜನ್ ಔಷಧಿಗಳಿಗೆ ಜಪಾನ್ ಹಾಗೂ ಯುರೋಪ್‍ಗಳಲ್ಲಿ ಪೇಟೆಂಟ್ ಪರಿಗಣನೆಯಲ್ಲಿದೆ. ಹಲವಾರು ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಮಾಸಪತ್ರಿಕೆಗಳಲ್ಲಿ ಮೇಲಿನ ಎಲ್ಲಾ ಔಷಧಿಗಳ ಬಗ್ಗೆ ಲೇಖನ ಪ್ರಕಟವಾಗಿದ್ದು , ಆಯುರ್ವೇದಕ್ಕೆ ವೈಜ್ಞಾನಿಕ ಹಿನ್ನೆಲೆ ಇಲ್ಲವೆಂಬ ಅಪವಾದವನ್ನು ನೀಗಿಸಲು ಈ ಪ್ರಯತ್ನವೆಂದು ಡಾ. ಎಂ. ವಿಜಯಭಾನು ಶೆಟ್ಟರು ತಿಳಿಸಿದ್ದಾರೆ.

ಆಯುರ್ವೇದ ಕ್ಷೇತ್ರದಲ್ಲಿ ಕಳೆದ ಮೂರು ತಲೆಮಾರಿನಿಂದ ಕಾರ್ಯ ನಿರ್ವಹಿಸುತ್ತಿರುವ ಮುನಿಯಾಲು ಆಯುರ್ವೇದ ಸಂಸ್ಥೆಯು ಮಣಿಪಾಲದಲ್ಲಿ ಆಯುರ್ವೇದ ಪದವಿ, ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ ಕೋರ್ಸ್‍ಗಳು, ಈ ವರ್ಷದಿಂದ ಯೋಗ ಮತ್ತು ನ್ಯಾಚುರೋಪತಿ ಡಿಗ್ರಿ ಕೋರ್ಸ್, ಸಂಶೋಧನ ಕೇಂದ್ರ, ಔಷಧ ತಯಾರಿಕಾ ಘಟಕ, ಆಸ್ಪತ್ರೆ, ಚಿಕಿತ್ಸಾಲಯಗಳು ಹಾಗೂ ರಾಷ್ಟ್ರಪತಿ ಡಾ. ಆಬ್ದುಲ್ ಕಲಾಂರಿಂದ ಬಿಡುಗಡೆಗೊಂಡ ಸಚಿತ್ರ ಚರಕ ಸಂಹಿತದಂತಹ ಅಮೂಲ್ಯ ಗ್ರಂಥ ರಚನೆಯೇ ಮೊದಲಾದವುಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.