ಅಮೇರಿಕಾದಲ್ಲಿ ಲ್ಯಾಪ್ ಟಾಪ್ ನಿಂದ 8 ವರ್ಷದ ಬಳಿಕ ಸಿಕ್ಕಿಬಿದ್ದ ಹಂತಕ: ಆತ ಮಾಡಿದ್ದೇನು?

ನವದೆಹಲಿ: ಅಮೆರಿಕದ ನ್ಯೂಜರ್ಸಿಯಲ್ಲಿ ಭೀಕರವಾಗಿ ಹತ್ಯೆಯಾಗಿದ್ದ ಭಾರತೀಯ ಮೂಲದ ತಾಯಿ ( Indian Woman ) ಮತ್ತು ಮಗನ ಕೊಲೆ ಪ್ರಕರಣದಲ್ಲಿ ಸುಮಾರು ಎಂಟು ವರ್ಷಗಳ ಬಳಿಕ ಆರೋಪಿಗೆ ದೋಷಾರೋಪ ಹೊರಿಸಲಾಗಿದೆ. ಆರೋಪಿ ಕೂಡ ಭಾರತೀಯ ಮೂಲದವನಾಗಿದ್ದು, ಇಡೀ ಪ್ರಕರಣದಲ್ಲಿ ಒಂದು ಲ್ಯಾಪ್​ಟಾಪ್​ ಪ್ರಮುಖ ಪಾತ್ರವಹಿಸಿದೆ.

ಆಂಧ್ರ ಪ್ರದೇಶ ಮೂಲದ ಶಶಿಕಲಾ ನಾರಾ ಮತ್ತು ಆಕೆಯ ಮಗ ಅನೀಶ್​ ನ್ಯೂಜರ್ಸಿಯಲ್ಲಿದ್ದ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಭೀಕರವಾಗಿ ಹತ್ಯೆಯಾಗಿದ್ದರು. ನಜೀರ್​ ಹಮೀದ್​ ಎಂಬಾತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಈತ ನ್ಯೂಜರ್ಸಿ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಶಿಕಲಾಳ ಪತಿಯ ಸಹೋದ್ಯೋಗಿ. ಶಶಿಕಲಾ ಅವರ ಮನೆಯಿಂದ ಕೆಲವೇ ದೂರದಲ್ಲಿ ಆತ ನೆಲೆಸಿದ್ದ.

ಕೊಲೆ ಮಾಡಿದ ಬಳಿಕ ಹಮೀದ್​ ಭಾರತಕ್ಕೆ ಎಸ್ಕೇಪ್​ ಆಗಿದ್ದ. ಇತ್ತೀಚೆಗೆ ಆತನ ಕಂಪನಿ ನೀಡಿದ ಲ್ಯಾಪ್‌ಟಾಪ್‌ನಿಂದ ತೆಗೆದ ಡಿಎನ್‌ಎ ಮಾದರಿಯು ಅಪರಾಧ ಸ್ಥಳದಿಂದ ಸಂಗ್ರಹಿಸಿದ ರಕ್ತದ ಮಾದರಿಯೊಂದಿಗೆ ಹೊಂದಿಕೆಯಾದ ಬಳಿಕ ಹಮೀದ್​ ಮೇಲೆ ದೋಷಾರೋಪ ಹೊರಿಸಲಾಗಿದೆ. ಆತನನ್ನು ಅಮೆರಿಕಕ್ಕೆ ಕರೆತರಲು ಅಲ್ಲಿನ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.

ಹಮೀದ್​ ಬಗ್ಗೆ ಮಾತನಾಡಿರುವ ಬರ್ಲಿಂಗ್ಟನ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯ ತನಿಖಾ ಮುಖ್ಯಸ್ಥ ಪ್ಯಾಟ್ರಿಕ್ ಥಾರ್ನ್ಟನ್, ಘಟನೆ ನಡೆದಾಗ ಹಮೀದ್ ವೀಸಾದ ಮೇಲೆ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ. ಆತ ಭಾರತಕ್ಕೆ ಮರಳಿದ ಬಳಿಕ ಅಂದಿನಿಂದ ಅಲ್ಲಿಯೇ ಇದ್ದಾನೆ ಎಂದಿದ್ದಾರೆ. ಸದ್ಯ ಆತನನ್ನು ಮರಳಿ ಅಮೆರಿಕಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ಅಂತಾನೂ ಮಾಹಿತಿ ನೀಡಿದ್ದಾರೆ.

ಏನಿದು ಕೇಸ್​?
2017, ಮಾರ್ಚ್ 23ರಂದು, ಹನು ನಾರಾ ಎಂಬುವರು ಮೇಪಲ್ ಶೇಡ್‌ನಲ್ಲಿರುವ ಫಾಕ್ಸ್ ಮೆಡೋ ಅಪಾರ್ಟ್‌ಮೆಂಟ್‌ನ ತಮ್ಮ ಮನೆಗೆ ಹಿಂದಿರುಗಿದರು. ಈ ವೇಳೆ ಅವರ ಪತ್ನಿ 38 ವರ್ಷದ ಪತ್ನಿ ಶಶಿಕಲಾ ನಾರಾ ಮತ್ತು ಅವರ 6 ವರ್ಷದ ಮಗ ಅನೀಶ್ ಮೃತಪಟ್ಟಿರುವುದನ್ನು ನೋಡಿ ಆಘಾತಕ್ಕೆ ಒಳಗಾದರು. ಅನೇಕ ಬಾರಿ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ಘಟನಾ ಸ್ಥಳದಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು. ತನಿಖೆ ನಡೆಯುತ್ತಿರುವ ಸಮಯದಲ್ಲಿ ಸಂಗ್ರಹಿಸಿದ ರಕ್ತದ ಮಾದರಿಗಳಲ್ಲಿ ಒಂದು ಶಶಿಕಲಾ ಅವರಿಗಾಗಲಿ ಅಥವಾ ಅವರ ಮಗನಿಗಾಗಲಿ ಹೊಂದಿಕೆಯಾಗಲಿಲ್ಲ. ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದರು.ಆರಂಭದಲ್ಲಿ ಶಶಿಕಲಾ ಅವರ ಪತಿ ಹನು ನಾರಾ ಅವರ ಮೇಲೆಯೇ ಅನುಮಾನ ಮೂಡಿತು. ಆದರೆ, ನಂತರದ ತನಿಖೆಯಲ್ಲಿ ಅವರ ಪಾತ್ರ ಇಲ್ಲದಿರುವುದು ಖಚಿತವಾಯಿತು.

ನ್ಯೂಜರ್ಸಿಯ ಕಾಗ್ನಿಜೆಂಟ್ ಟೆಕ್ನಾಲಜೀಸ್‌ನಲ್ಲಿ ಹನು ನಾರಾ ಕೆಲಸ ಮಾಡುತ್ತಿದ್ದ. ಅದೇ ಕಂಪನಿಯಲ್ಲಿ ನಜೀರ್​ ಹಮೀದ್ ಸಹೋದ್ಯೋಗಿಯಾಗಿದ್ದ. ಈ ಹಮೀದ್​, ಶಶಿಕಲಾ ಅವರ ಮನೆಯಿಂದ ಕಾಲ್ನಡಿಗೆ ದೂರದಲ್ಲಿ ನೆಲೆಸಿದ್ದ. ಈ ಘಟನೆ ನಡೆದ ಆರು ತಿಂಗಳ ಬಳಿಕ ಹಮೀದ್ ಭಾರತಕ್ಕೆ ಮರಳಿದನು. ಆತ ಭಾರತಕ್ಕೆ ಹಿಂದಿರುಗಿದ ನಂತರವೂ ಕಾಗ್ನಿಜೆಂಟ್‌ನ ಉದ್ಯೋಗಿಯಾಗಿಯೇ ಉಳಿದಿದ್ದ. ತನ್ನ ಜಾಡುಗಳನ್ನು ಮುಚ್ಚಿಡಲು ಮತ್ತು ತನ್ನ ಅಪರಾಧ ಇತಿಹಾಸವನ್ನು ಮರೆಮಾಚಲು ತಂತ್ರಜ್ಞಾನ ಮೇಲಿನ ತನ್ನ ವ್ಯಾಪಕ ಜ್ಞಾನವನ್ನು ಬಳಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರ ನಡುವೆ ಪ್ರಕರಣದ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಗಳು ಭಾರತದ ಅಧಿಕಾರಿಗಳನ್ನು ಸಂಪರ್ಕಿಸಿದರು. ಅವರ ಮೂಲಕ ಹಮೀದ್​ನನ್ನು ಸಂಪರ್ಕಿಸಿ ಡಿಎನ್ಎ ಮಾದರಿಯನ್ನು ನೀಡುವಂತೆ ಕೇಳಿದರು. ಆದಾಗ್ಯೂ, ಆತ ಡಿಎನ್​​ಎ ಮಾದರಿ ನೀಡಲು ನಿರಾಕರಿಸಿನು. ಇದಾದ ಬಳಿಕ ಡಿಎನ್ಎ ಮಾದರಿ ಪಡೆಯಲು ನಿರ್ಧರಿಸಿದ ಅಧಿಕಾರಿಗಳು, 2024ರಲ್ಲಿ ನ್ಯಾಯಾಲಯದ ಆದೇಶವನ್ನು ಪಡೆದರು. ಇದಾದ ನಂತರ ಹಮೀದ್ ಕೆಲಸ ಮಾಡುತ್ತಿದ್ದ ಲ್ಯಾಪ್‌ಟಾಪ್ ಅನ್ನು ಕಳುಹಿಸುವಂತೆ ಕಾಗ್ನಿಜೆಂಟ್​ ಕಂಪನಿಗೆ ಮನವಿ ಮಾಡಿದರು. ಅಂತಿಮವಾಗಿ ಲ್ಯಾಪ್​ಟಾಪ್​ ಕೂಡ ಸಿಕ್ಕಿತು. ಅದರಲ್ಲಿ ಹಮೀದ್​ ಡಿಎನ್‌ಎ ಅನ್ನು ಪಡೆಯಲಾಯಿತು. ಈ ಡಿಎನ್​ಎ ಅಪರಾಧ ಸ್ಥಳದಿಂದ ಅಪರಿಚಿತ ರಕ್ತದ ಹನಿಯ ಡಿಎನ್‌ಎಗೆ ಹೊಂದಿಕೆಯಾಯಿತು. ಅಂತಿಮವಾಗಿ ಕೊಲೆ ಹಿಂದಿರುವ ಕೈ ಹಮೀದ್‌ನದ್ದು ಎಂಬುದು ಗೊತ್ತಾಯಿತು.

ಇನ್ನು ಈ ಕ್ರೂರ ಹತ್ಯೆಯ ಹಿಂದಿನ ಹಮೀದ್‌ ಉದ್ದೇಶ ಏನಿತ್ತು ಎಂಬುದು ತನಿಖಾಧಿಕಾರಿಗಳಿಗೆ ಇನ್ನೂ ಖಚಿತವಿಲ್ಲ. ಆದರೆ, ಸಂದರ್ಭಗಳನ್ನು ಆಧರಿಸಿ, ಆತ ಹನು ನಾರಾ ಅವರ ವಿರುದ್ಧ ಕೆಲವು ವೈಯಕ್ತಿಕ ದ್ವೇಷ ಸಾಧಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಈಗ, ತನಿಖಾಧಿಕಾರಿಗಳು ಹಮೀದ್‌ನನ್ನು ಅಮೆರಿಕಕ್ಕೆ ಹಸ್ತಾಂತರಿಸಲು ನ್ಯಾಯಾಂಗ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ,