ಅಂಬೇಡ್ಕರ್ ಸ್ಮರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ; ಮಹಾಪರಿನಿರ್ವಾಣ ದಿನ

ನವದೆಹಲಿ : ಶೋಷಿತ ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಪಿಎಂ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಇಂದು ದೇಶಾದ್ಯಂತ ಮಹಾಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ.

ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರ ಸ್ಮರಣಾರ್ಥ ಇಂದು ದೇಶದಲ್ಲಿ ಮಹಾಪರಿನಿರ್ವಾಣ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪಾಧ್ಯಕ್ಷ ಜಗದೀಪ್ ಧನಕರ್ ಅವರು ಸಂಸತ್ತಿನ ಸಂಕೀರ್ಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಣ್ಯತಿಥಿ ನಿಮಿತ್ತ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಕೂಡ ಬಾಬಾಸಾಹೇಬರನ್ನು ಸ್ಮರಿಸಿ ನಮನ ಸಲ್ಲಿಸಿದರು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನು ಸಮಾನ ಮತ್ತು ನ್ಯಾಯಯುತ ಸಮಾಜದ ಸ್ಥಾಪನೆ, ರಾಷ್ಟ್ರದ ಪ್ರಗತಿ, ಮಾನವ ಹಕ್ಕುಗಳು ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ ಪುಣ್ಯತಿಥಿಯಂದು ಅವರಿಗೆ ನನ್ನ ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ” ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ ಆಯಪ್​ನಲ್ಲಿ ಪೋಸ್ಟ್​ ಮಾಡಿರುವ ಪಿಎಂ, “ಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಸೃಷ್ಟಿಕರ್ತ ಮತ್ತು ಸಾಮಾಜಿಕ ಸಾಮರಸ್ಯದ ಅಮರ ಬೆಂಬಲಿಗರಾಗಿದ್ದರು. ಶೋಷಿತರು ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇಂದು ಅವರ ಮಹಾಪರಿನಿರ್ವಾಣ ದಿನ, ಅವರಿಗೆ ನನ್ನ ಗೌರವಪೂರ್ವಕ ನಮನಗಳು” ಎಂದು ತಿಳಿಸಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು 14 ಏಪ್ರಿಲ್ 1891 ರಂದು ಜನಿಸಿದ್ದು, 6 ಡಿಸೆಂಬರ್ 1956 ರಂದು ನಿಧನರಾದರು. ಭಾರತೀಯ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕ. ದಲಿತರ ಮೇಲಿನ ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಟ ಮಾಡಿದ್ದರು. ಅಷ್ಟೇ ಅಲ್ಲದೆ, ಅಂಬೇಡ್ಕರ್ ಒಬ್ಬ ಅದ್ಭುತ ವಿದ್ಯಾರ್ಥಿ, ಅವರು ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು ಕೊಂಡಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಕ್ಸ್​ ಆಯಪ್​ನಲ್ಲಿ ಪೋಸ್ಟ್​ ಮಾಡಿ, ‘ಮಹಾಪರಿನಿರ್ವಾಣ ದಿವಸ್’ದಂದು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರು ದೇಶಕ್ಕೆ ನೀಡಿದ ಗಮನಾರ್ಹ ಕೊಡುಗೆಯನ್ನು ಸ್ಮರಿಸುತ್ತಿದ್ದೇನೆ. ಅವರ ಆಲೋಚನೆಗಳು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. ನಮ್ಮ ಮುಂದಿನ ಪೀಳಿಗೆಗಳು ಭಾರತದ ಸಂವಿಧಾನದ ರಚನೆಯಲ್ಲಿ ಅವರ ಪಾತ್ರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಮಹಾಡ್‌ನಲ್ಲಿ ಸತ್ಯಾಗ್ರಹದ ನೇತೃತ್ವ ವಹಿಸಿ ಪಟ್ಟಣದ ಮುಖ್ಯ ನೀರಿನ ಟ್ಯಾಂಕ್‌ನಿಂದ ನೀರು ಸೇದುವ ಮೂಲಕ ಅಸ್ಪೃಶ್ಯ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಸೆಪ್ಟೆಂಬರ್ 25, 1932 ರಂದು ಅಂಬೇಡ್ಕರ್ ಮತ್ತು ಮದನ್ ಮೋಹನ್ ಮಾಳವೀಯ ನಡುವೆ ಪೂನಾ ಒಪ್ಪಂದ ಎಂಬ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದಿಂದಾಗಿ ದಲಿತ ಸಮುದಾಯಕ್ಕೆ ಈ ಹಿಂದೆ ನೀಡಲಾಗಿದ್ದ 71 ಸ್ಥಾನಗಳ ಬದಲಿಗೆ 148 ಶಾಸಕ ಸ್ಥಾನಗಳು ಲಭಿಸಿದವು.