ಅಂಬಲಪಾಡಿ: ಪಾದಚಾರಿ ರಸ್ತೆಯಲ್ಲಿ ರಾಶಿ ರಾಶಿ ತ್ಯಾಜ್ಯ; ಸೂಕ್ತ ಕ್ರಮಕ್ಕೆ ನಾಗರಿಕ ಸಮಿತಿ ಆಗ್ರಹ

ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ವ್ಯವಹಾರ ಕಾಂಪ್ಲೆಕ್ಸ್ ಬಳಿ, ಸರ್ವಿಸ್ ರಸ್ತೆಯ ಪಕ್ಕದ ಪಾದಚಾರಿ ರಸ್ತೆಯ ಮೇಲೆ, ಸಾರ್ವಜನಿಕರು ಪ್ಲಾಸ್ಟಿಕ್, ಕೋಳಿ ತ್ಯಾಜ್ಯ, ಹಸಿ ಮತ್ತು ಒಣ ತ್ಯಾಜ್ಯ, ಸತ್ತ ಪ್ರಾಣಿಗಳ ಕಳೇಬರಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ.

ಪರಿಸರದಲ್ಲಿ ಗಬ್ಬು ವಾಸನೆ ಹಬ್ಬಿದ್ದು, ರೋಗವಾಹಕ ಸೊಳ್ಳೆಗಳ ಉತ್ಪತ್ತಿ ತಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತ್ಯಾಜ್ಯ ವಿಲೇವಾರಿಗೊಳಿಸಬೇಕು. ಸ್ಥಳದಲ್ಲಿ ಸೂಚನಾ ಫಲಕ ಅಳವಡಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.