ಅಂಬಾಗಿಲು: ರಸ್ತೆ ಬದಿಯ ಮಣ್ಣು ಕುಸಿತ: ಮಣ್ಣಿನಲ್ಲಿ ಸಿಲುಕಿದ ತಂಪುಪಾನೀಯ‌ ಸಾಗಾಟದ ವಾಹನ

ಉಡುಪಿ: ರಸ್ತೆ ಬದಿಯ ಮಣ್ಣು ಕುಸಿದ ಪರಿಣಾಮ ತಂಪು ಪಾನೀಯ ಸಾಗಾಟದ ವಾಹನವೊಂದು ಮಣ್ಣಿನಲ್ಲಿ ಸಿಲುಕಿಕೊಂಡ ಘಟನೆ ಅಂಬಾಗಿಲು–ಮಣಿಪಾಲ ರಸ್ತೆಯ ಸುಜಾತಾ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಶನಿವಾರ ನಡೆದಿದೆ.

ಮಣ್ಣಿನಲ್ಲಿ ಸಿಲುಕಿದ ವಾಹನವನ್ನು ಸ್ಥಳೀಯರ ಸಹಾಯದಿಂದ ಹೊರತೆಗೆಯಲಾಯಿತು. ಚರಂಡಿ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿ ಹೊಂಡವನ್ನು ತೋಡಲಾಗಿದ್ದು, ಕಾಮಗಾರಿ ಬಳಿಕ ಅದನ್ನು ಸಮರ್ಪಕವಾಗಿ ಮುಚ್ಚದಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇತ್ತೀಚಿನ ಮಳೆಯಿಂದ ನೀರು ಹರಿದು ಮಣ್ಣು ಸಡಿಲಗೊಂಡಿದ್ದು, ರಸ್ತೆಯ ಅಂಚಿನಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ.

ರಸ್ತೆಯ ಅಂಚಿನ ಮಣ್ಣು ಕುಸಿಯುತ್ತಿರುವುದರಿಂದ ವಾಹನಗಳ ಚಕ್ರಗಳು ಮಣ್ಣಿನಲ್ಲಿ ಹೂತು ಹೋಗುತ್ತಿವೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಪಾದಚಾರಿಗಳು‌ ಸಮಸ್ಯೆ ಅನುಭವಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಗುಂಡಿಯನ್ನು ಸಮರ್ಪಕವಾಗಿ ಮುಚ್ಚಿಲು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.