ಬೆಂಗಳೂರು: ರಾಜಧಾನಿ ಬೆಂಗಳೂರು, ಮುಂಬೈ ಮತ್ತು ದೆಹಲಿ-ಎನ್ಸಿಆರ್ನಂತಹ ಮಹಾನಗರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಮೆಜಾನ್ ನೌ ಸೇವೆ ಇದೀಗ ಕರ್ನಾಟಕದ ಪ್ರಮುಖ ನಗರಗಳಾದ ಮಂಗಳೂರು ಮತ್ತು ಮೈಸೂರಿಗೂ ವಿಸ್ತರಿಸಲಾಗುತ್ತಿದೆ. ಭಾರತದ ಕ್ವಿಕ್ ಕಾಮರ್ಸ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚುತ್ತಿರುವ ಹಿನ್ನೆಲೆ, ಈ ವಲಯದಲ್ಲಿ ತನ್ನ ಸ್ಥಾನ ಮತ್ತಷ್ಟು ಬಲಪಡಿಸಲು ಇ-ಕಾಮರ್ಸ್ ದೈತ್ಯ ಅಮೆಜಾನ್ ಮಹತ್ವದ ಹೆಜ್ಜೆ ಇಟ್ಟಿದೆ.
ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ಅಗತ್ಯ ವಸ್ತುಗಳನ್ನು ತಲುಪಿಸುವ ‘ಅಮೆಜಾನ್ ನೌ’ ಸೇವೆಯನ್ನು ಈಗಾಗಲೇ ಹಲವು ನಗರಗಳಲ್ಲಿ ಆರಂಭಿಸಿರುವ ಕಂಪನಿ, ಇದೀಗ ದೇಶದ 100 ನಗರಗಳಿಗೆ ಈ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ.
ಇದಕ್ಕಾಗಿ ಅಮೆಜಾನ್ ಸುಮಾರು ₹2,800 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ. ಈ ಹೂಡಿಕೆಯನ್ನು ವ್ಯಾಪಾರ ವಿಸ್ತರಣೆಯ ಜೊತೆಗೆ ಉದ್ಯೋಗಿಗಳ ಸುರಕ್ಷತೆ, ಆರೋಗ್ಯ ಹಾಗೂ ಆರ್ಥಿಕ ಕಲ್ಯಾಣಕ್ಕೂ ಬಳಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಭಾರತದ ಅತ್ಯಂತ ವೇಗದ, ಸುರಕ್ಷಿತ ಮತ್ತು ವಿಶ್ವಾಸಾರ್ಹ ವಿತರಣಾ ಜಾಲ ನಿರ್ಮಿಸುವ ಗುರಿಯನ್ನು ಕಂಪನಿ ಹೊಂದಿದೆ.
ಈ ವಿಸ್ತರಣೆಗೆ ಬೆಂಬಲವಾಗಿ ದೇಶಾದ್ಯಂತ 1,000ಕ್ಕೂ ಹೆಚ್ಚು ವಿಶೇಷ ಮೈಕ್ರೋ-ಫುಲ್ಫಿಲ್ಮೆಂಟ್ ಕೇಂದ್ರಗಳನ್ನು (MFC) ಸ್ಥಾಪಿಸಲಾಗುತ್ತಿದೆ. ಕರ್ನಾಟಕದ ಮಂಗಳೂರು ಮತ್ತು ಮೈಸೂರಿನ ಜೊತೆಗೆ ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಜೈಪುರ, ಲಕ್ನೋ, ಕಾನ್ಪುರ, ಚಂಡೀಗಢ, ಅಹಮದಾಬಾದ್, ಮೀರತ್, ಪಾಣಿಪತ್, ಕೊಚ್ಚಿ, ಅಮೃತಸರ ಹಾಗೂ ವೈಜಾಗ್ ಸೇರಿದಂತೆ ಅನೇಕ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ಸೇವೆ ವಿಸ್ತರಿಸಲಾಗುತ್ತಿದೆ.

















